ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇತರರ ಜೀವನವನ್ನು ಸುಧಾರಿಸಲು ದಣಿವರಿಯಿಲ್ಲದೆ ಶ್ರಮಿಸುತ್ತಿದ್ದ ಅಸಾಧಾರಣ ನಾಯಕರಾಗಿದ್ದ ಎಸ್.ಎಂ.ಕೃಷ್ಣ ಅವರ ನಿಧನದಿಂದ ಅತೀವ ನೋವುಂಟಾಗಿದೆ ಎಂದು ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣ ‘X’ನಲ್ಲಿ ಪ್ರಧಾನಿಯವರು ಬರೆದುಕೊಂಡಿರುವ ಸಾಲುಗಳು ಗಮನಸೆಳೆದಿವೆ. ‘ಎಸ್.ಎಂ.ಕೃಷ್ಣಾಜಿಯವರು ಅಸಾಧಾರಣ ನಾಯಕರಾಗಿದ್ದರು, ಸಮಾಜದ ಎಲ್ಲ ವರ್ಗಗಳ ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯಿಲ್ಲದೆ ಶ್ರಮಿಸಿದರು. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಿದ್ದಾರೆ. ಶ್ರೀ ಎಸ್.ಎಂ.ಕೃಷ್ಣ ಜೀ ಅವರು ಸಮೃದ್ಧ ಓದುಗ ಮತ್ತು ಚಿಂತಕರೂ ಆಗಿದ್ದರು’ಎಂದು ಮೋದಿ ಬಣ್ಣಿಸಿದ್ದಾರೆ.

‘ಹಲವು ವರ್ಷಗಳಿಂದ ಎಸ್.ಎಂ.ಕೃಷ್ಣ ಜೀ ಅವರೊಂದಿಗೆ ಸಂವಹನ ನಡೆಸಲು ನನಗೆ ಅನೇಕ ಅವಕಾಶಗಳಿವೆ ಮತ್ತು ಆ ಸಂವಾದಗಳನ್ನು ನಾನು ಯಾವಾಗಲೂ ಪಾಲಿಸುತ್ತೇನೆ. ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ, ರಾಜ್ಯದ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಡುವ, ಹಿರಿಯ ಮುತ್ಸದ್ದಿ, ಶ್ರೀ ಎಸ್ಎಂ ಕೃಷ್ಣ ಅವರು ಇಂದು ನಮ್ಮನ್ನು ಅಗಲಿದ್ದಾರೆ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿಯ ಹಿರಿಯ ನಾಯಕ ಸಿ.ಟಿ.ರವಿ ದುಃಖ ವ್ಯಕ್ತಪಡಿಸಿದ್ದಾರೆ. ಇಹಾಕಾಯವನ್ನು ಅಗಲಿದ ಅವರಾತ್ಮಕ್ಕೆ ಭಗವಂತ ಮೋಕ್ಷ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.