ಇವಿ ಕ್ಷೇತ್ರದಲ್ಲಿ ಬೆಸ್ಕಾಂ ಮೈಲಿಗಲ್ಲು: ದೇಶದ ಪ್ರಥಮ ಸೌರಶಕ್ತಿ ಸಂಯೋಜಿತ ‘ಇವಿ ಹಬ್’ ಲೋಕಾರ್ಪಣೆ

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ ಬಳಿ ದೇಶದ ಪ್ರಥಮ ಸೌರಶಕ್ತಿ ಸಂಯೋಜಿತ ಸೆಕೆಂಡ್ ಲೈಫ್ ಬ್ಯಾಟರಿ ಇವಿ ಚಾರ್ಜಿಂಗ್ ಕೇಂದ್ರವನ್ನು ಲೋಕಾರ್ಪಣೆ ಗೊಳಿಸಲಾಗಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಈ ಬೃಹತ್ ‘ಇವಿ ಚಾರ್ಜಿಂಗ್ ಹಬ್’ ಉದ್ಘಾಟಿಸಿದರು.

ಬೆಸ್ಕಾಂ, ಜರ್ಮನ್ ಕಾರ್ಪೊರೇಷನ್ ಫಾರ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ (ಜಿ.ಐ.ಝಡ್) ಮತ್ತು ಬಾಷ್ ಕಂಪನಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಇವಿ ಚಾರ್ಜಿಂಗ್ ಹಬ್‌ನಲ್ಲಿ 23 ವಾಹನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ.

ಬಿಐಎಎಲ್ ಇವಿ ಹಬ್, ಸೆಕೆಂಡ್-ಲೈಫ್ ಬ್ಯಾಟರಿ ಸಿಸ್ಟಮ್‌ಗಳ ಭಾರತದ ಮೊದಲ ವಾಣಿಜ್ಯ ಅಪ್ಲಿಕೇಶನ್ ಕೇಂದ್ರವಾಗಿದ್ದು, 45 ಕಿ.ವ್ಯಾ. ಸೌರ ವಿದ್ಯುತ್ ವ್ಯವಸ್ಥೆ ಮತ್ತು 100 ಕಿ.ವ್ಯಾ.ಹೆಚ್. ಸೆಕೆಂಡ್-ಲೈಫ್ ಬ್ಯಾಟರಿ ಸಂಗ್ರಹಣೆ ಸಾಮರ್ಥ್ಯ ದೊಂದಿಗೆ ಏಕಕಾಲದಲ್ಲಿ 18 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು 5 ಸ್ಲೋ ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಒಟ್ಟು 23 ಚಾರ್ಜಿಂಗ್ ಪಾಯಿಂಟ್‌ಗಳ ಬೃಹತ್ ಚಾರ್ಜಿಂಗ್ ಕೇಂದ್ರವಾಗಿದೆ.

ಈ ಅತ್ಯಾಧುನಿಕ ಇವಿ ಹಬ್, ತಾಂತ್ರಿಕ ಪ್ರಗತಿ ಜತೆಗೆ ಸುಸ್ಥಿರ ಇಂಧನ ಮತ್ತು ಇ-ಮೊಬಿಲಿಟಿಯನ್ನು ಪ್ರೋತ್ಸಾಹಿಸುವ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ.

ಇಂಧನ ಇಲಾಖೆ ಅಪರ ಕಾರ್ಯದರ್ಶಿ ಗೌರವ್ ಗುಪ್ತ, ಕೆ.ಪಿ.ಟಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್ ಶಿವಶಂಕರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.