ಬೆಂಗಳೂರು: ಬೆಂ.ಮ.ಸಾ.ಸಂಸ್ಥೆಯ ಚಾಲಕರಿಗೆ ಅಪಘಾತರಹಿತ ಚಾಲನೆಗಾಗಿ ಸಂಸ್ಥೆಯಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ಅಪಘಾತ ಮಾಡಿದ್ರೆ ಸಸ್ಪೆಂಡ್, ಕೆಲಸದಿಂದಲೇ ವಜಾದಂತ ಕ್ರಮ ಕೈಗೊಳ್ಳಲಾಗುತ್ತಿದೆ.
ಬಿಎಂಟಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು, ವಿಭಾಗೀಯ ತಾಂತ್ರಿಕ ಅಭಿಯಂತರರು ಹಾಗೂ ಎಲ್ಲಾ ಘಟಕ ವ್ಯವಸ್ಥಾಪಕರ ಸಭೆ ಕರೆದು, ಚಾಲಕರಿಗೆ ಅಪಘಾತರಹಿತ ಚಾಲನೆ ಮಾಡುವ ಬಗ್ಗೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡದಿರುವ ಬಗ್ಗೆ ಚಾಲಕರಿಗೆ ದೈನಂದಿನ ನಿರ್ದೆಶನಗಳನ್ನು ನೀಡುವ ಬಗ್ಗೆ ಚರ್ಚಿಸಿ, ಮಾರಣಾಂತಿಕ ಅಪಘಾತ ನಿಯಂತ್ರಣಕ್ಕಾಗಿ ಈ ಕೆಳಕಂಡಂತೆ ಮಾರ್ಗ ದರ್ಶನ ನೀಡಿರುತ್ತಾರೆ.
ನಗರದಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸುರಕ್ಷಿತ ಸಾರಿಗೆ ಸೌಲಭ್ಯ ಒದಗಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಚಾಲಕರಿಂದಾಗುವ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ದೃಷ್ಟಿಯಿಂದ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಪ್ರಯಾಣಿಕರ ಜೀವ ರಕ್ಷಣೆ ಹಾಗೂ ರಸ್ತೆ ಸುರಕ್ಷತೆಯನ್ನು ಪ್ರಧಾನ ಗುರಿಯಾಗಿ ಸಂಸ್ಥೆ ಕೈಗೊಂಡಿರುವ ಕ್ರಮಗಳ ಕೆಳಕಂಡಂತಿದೆ:
ಅಪಘಾತಗಳ ಪರಿಶೀಲನೆ
• ಆಗಸ್ಟ್ 2025ರಲ್ಲಿ ಒಟ್ಟು 04 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಒಂದು ವಿದ್ಯುತ್ಚಾಲಿತ ಬಸ್ಸಿಗೆ ಸಂಬಂಧಿಸಿದೆ.
• ಪರಿಶೀಲನೆಯ ಪ್ರಕಾರ, 03 ಪ್ರಕರಣಗಳಲ್ಲಿ ಬಿಎಂಟಿಸಿ ಚಾಲಕರ ಹೊಣೆಗಾರಿಕೆ ಇರಲಿಲ್ಲ. ಕೇವಲ 01 ಪ್ರಕರಣದಲ್ಲಿ ಪ್ರಯಾಣಿಕರ ನಿರ್ಲಕ್ಷ್ಯ ಹಾಗೂ ವಿದ್ಯುತ್ ಬಸ್ ಚಾಲಕರ ನಿರ್ವಹಣಾ ತಪ್ಪು ಕಾರಣವಾಗಿದೆ.
• ಹೆಚ್ಚಿನ ಸಂದರ್ಭಗಳಲ್ಲಿ, ದ್ವಿಚಕ್ರ ವಾಹನ ಸವಾರರು ಬಸ್ಸನ್ನು ಅತಿಕ್ರಮಿಸಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡು ಬಸ್ಸಿಗೆ ತಾಕುವುದು ಮುಖ್ಯ ಕಾರಣವೆಂದು ವರದಿ ತಿಳಿಸಿದೆ.
ಚಾಲಕರಿಗೆ ತರಬೇತಿ
• ಡಿಸೆಂಬರ್ 2023ರಿಂದ ಸಂಚಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಬಿಎಂಟಿಸಿ ಚಾಲಕರಿಗೆ ಸುರಕ್ಷಾ ಚಾಲನಾ ತರಬೇತಿ ನೀಡಲಾಗುತ್ತಿದೆ.
• ಜುಲೈ 2025ರವರೆಗೆ 11,835 ಚಾಲಕರು ತರಬೇತಿಗೊಳಗಾಗಿದ್ದಾರೆ.
• ಟ್ರಾಫಿಕ್ ಕಮಾಂಡ್ ಸೆಂಟರ್ನಲ್ಲಿ ಅಪಘಾತ ಮತ್ತು ಉಲ್ಲಂಘನೆಗಳ ವೀಡಿಯೋ ತುಣುಕುಗಳನ್ನು ತೋರಿಸಿ ಚಾಲಕರಲ್ಲಿ ಅರಿವು ಮೂಡಿಸಲಾಗಿದೆ.
• ವಿದ್ಯುತ್ಚಾಲಿತ ಬಸ್ ಚಾಲಕರಿಗೆ ವಿಶೇಷ ತರಬೇತಿ ಏರ್ಪಡಿಸಲಾಗಿದ್ದು, 1,187 ಚಾಲಕರು ಇದುವರೆಗೆ ಪಾಲ್ಗೊಂಡಿದ್ದಾರೆ.
ಅರಿವು ಕಾರ್ಯಕ್ರಮಗಳು
• ಘಟಕಗಳಲ್ಲಿ ‘ಬದುಕು ಬದುಕಿಸು’ ಹಾಗೂ ಬಸ್ ನಿಲ್ದಾಣಗಳಲ್ಲಿ ‘ಬಸ್ ಬಂತು ಬಸ್’ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸಲಾಗಿದೆ.
• ಪ್ರತಿ ವರ್ಷ ಜನವರಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ/ಮಾಸ ಆಚರಣೆ.
• ಜನವರಿ 24ರಂದು ಚಾಲಕರ ದಿನಾಚರಣೆ, ಸುರಕ್ಷಿತ ಚಾಲನೆ ಮಾಡಿದವರಿಗೆ ಗೌರವ.
ಚಾಲಕರ ಮೇಲಿನ ಒತ್ತಡ ನಿಯಂತ್ರಣಕ್ಕೆ ಕ್ರಮ ಹಾಗೂ ಪುರಸ್ಕಾರ
• ಚಾಲಕರ ಒತ್ತಡ ಕಡಿಮೆ ಮಾಡಲು, 2,000 ಅನುಸೂಚಿಗಳಲ್ಲಿ ಸಮಯವನ್ನು ಪರಿಷ್ಕರಿಸಿ ರನ್ನಿಂಗ್ ಟೈಮ್ ಹೆಚ್ಚಿಸಲಾಗಿದೆ.
• ಅಪಘಾತರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ.
• ಕರ್ತವ್ಯದ ವೇಳೆ ಮೊಬೈಲ್ ಬಳಕೆ ಪತ್ತೆಯಾದರೆ, ಚಾಲಕರಿಗೆ 15 ದಿನಗಳ ಅಮಾನತ್ತು ಹಾಗೂ ಘಟಕ ವರ್ಗಾವಣೆ ಕ್ರಮ ಜಾರಿಯಲ್ಲಿ.
• ಘಟಕ ಪ್ರವೇಶ ದ್ವಾರದಲ್ಲೇ ಮದ್ಯಪಾನ ತಪಾಸಣೆ ಹಾಗೂ ಸಾರಥಿ ಗಸ್ತು ವಾಹನದಿಂದ ಮಾರ್ಗ ಮಧ್ಯೆ ಚಾಲನಾ ಸಿಬ್ಬಂದಿಗಳ ತಪಾಸಣೆ.
ಶಿಸ್ತು ಪಾಲನಾ ಕ್ರಮಗಳು
• ಮೊದಲ ಮಾರಣಾಂತಿಕ ಅಪಘಾತಕ್ಕೆ ಅಮಾನತ್ತು ಹಾಗೂ ಸೇವೆಯಿಂದ ವಜಾ ಮಾಡುವ ಶಿಸ್ತಿನ ಕ್ರಮವನ್ನು ಸಂಸ್ಥೆ ಅಳವಡಿಸಿಕೊಂಡಿದೆ.
• ಕಳೆದ ಒಂದು ವರ್ಷದಲ್ಲಿ ನಡೆದ 20 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 20 ಚಾಲಕರನ್ನು ಅಮಾನತ್ತಿನಲ್ಲಿ ಇಡಲಾಗಿದೆ.
• ಅಪಘಾತಕ್ಕೆ ಕಾರಣವಾದ ಹಾಗೂ ದುರುಳ ನಡವಳಿಕೆಯನ್ನು ತೋರಿದ ಚಾಲಕರಿಗೆ ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲಿ ವಿಶೇಷ ತರಬೇತಿ ಕಡ್ಡಾಯ.
ನಿರಂತರ ಮೇಲ್ವಿಚಾರಣೆ
• ವ್ಯವಸ್ಥಾಪಕ ನಿರ್ದೇಶಕರ ನಿರ್ದೇಶನದಂತೆ ಎಲ್ಲಾ ಘಟಕಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಸಭೆ ನಡೆಸಿ ಚಾಲಕರಿಗೆ ಸುರಕ್ಷಾ ಚಾಲನೆ ಹಾಗೂ ನಿಯಮ ಪಾಲನೆಯ ಕುರಿತು ದಿನನಿತ್ಯ ಸೂಚನೆ ನೀಡಲಾಗುತ್ತಿದೆ.
• ವಲಯವಾರು ವಾರದಲ್ಲಿ ಕನಿಷ್ಠ ಎರಡು ಬಾರಿ ಚಾಲನಾ ತರಬೇತಿ.
ಆದ್ಯ ಗಮನಕ್ಕಾಗಿ
ಸಂಸ್ಥೆಯ ವಾಹನವು ಮಾರಣಾಂತಿಕ ಅಪಘಾತದಲ್ಲಿ ಭಾಗಿಯಾದಾಗ, ಸಂಸ್ಥೆಯ ಚಾಲಕರ ತಪ್ಪಿಲ್ಲದೇ ಇರುವ ಸಂದರ್ಭಗಳಲ್ಲಿಯೂ ಸಹ ತಪ್ಪಾದ ಶೀರ್ಷಿಕೆಗಳನ್ನು (ಕಿಲ್ಲರ್ ಬಿಎಂಟಿಸಿ, ಬಿಎಂಟಿಸಿ ಬಸ್ ಡಿಕ್ಕಿ, ಸಾವು) ಪಕ್ರಟಿಸುತ್ತಿರುವುದು ವಿಷಾದಕರ ಸಂಗತಿಯಾಗಿದ್ದು, ವಾಸ್ತವ ಸಂಗತಿ ಆಧಾರಿತ ಮಾಹಿತಿಯನ್ನು ಬಿತ್ತರಿಸಲು ಸಂಸ್ಥೆಯು ಕೋರುತ್ತದೆ. (ಆಗಸ್ಟ್ 2025ರಲ್ಲಿ ನಡೆದ ಪರಿಶೀಲನೆಯ ಪ್ರಕಾರ, 03 ಪ್ರಕರಣಗಳಲ್ಲಿ ಬಿಎಂಟಿಸಿ ಚಾಲಕರ ಹೊಣೆಗಾರಿಕೆ ಇರಲಿಲ್ಲ. ಕೇವಲ 01 ಪ್ರಕರಣದಲ್ಲಿ ಪ್ರಯಾಣಿಕರ ನಿರ್ಲಕ್ಷ್ಯ ಹಾಗೂ ವಿದ್ಯುತ್ ಬಸ್ ಚಾಲಕರ ನಿರ್ವಹಣಾ ತಪ್ಪು ಕಾರಣವಾಗಿದೆ.)
ಸಂಸ್ಥೆಯು ಪ್ರಯಾಣಿಕರಲ್ಲಿ ಹಾಗೂ ದ್ವಿಚಕ್ರ ವಾಹನ ಸವಾರರಲ್ಲಿ ಕೋರುವುದೇನೆಂದರೆ, ರಸ್ತೆ ಸುರಕ್ಷತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಭಾರಿ ವಾಹನಗಳ ನಡುವೆ ಚಲಿಸುವಾಗ, ಸುರಕ್ಷಿತವಾಗಿ ಚಾಲನೆ ಮಾಡಲು ಹಾಗೂ ರಸ್ತೆಯ ಎಡಭಾಗದಿಂದ ಬಸ್ಸನ್ನು ಹಿಂದಿಕ್ಕಲು ಪ್ರಯತ್ನಿಸದಂತೆ ಮನವಿ ಮಾಡುತ್ತದೆ.




