ಬೆಂಗಳೂರು: ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಸುಮಾರು 2,000 ಕೋಟಿ ರೂಪಾಯಿ ಮೊತ್ತದ ಬೃಹತ್ ನಕಲಿ ಐಟಿಸಿ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಈ ಹಗರಣದ ತನಿಖೆಯ ಭಾಗವಾಗಿ ರಾಜ್ಯ ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ್ದೆನ್ನಲಾದ ಪ್ರಸಿದ್ಧ ‘ನ್ಯಾಷನಲ್ ಟ್ರಾವೆಲ್ಸ್’ ಸಂಸ್ಥೆಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಕಲಿ ಬಿಲ್‌ಗಳ ಸಾಗಾಟಕ್ಕೆ ನ್ಯಾಷನಲ್ ಟ್ರಾವೆಲ್ಸ್‌ನ ಲಾರಿಗಳನ್ನು ಬಳಸಿಕೊಳ್ಳಲಾದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮುಖ್ಯಾಂಶಗಳು:
ವಾಣಿಜ್ಯ ತೆರಿಗೆ ಇಲಾಖೆಯಿಂದ ಎರಡು ಸಾವಿರ ಕೋಟಿ ರೂ. ಮೌಲ್ಯದ ನಕಲಿ ಐಟಿಸಿ ಹಗರಣ ಪತ್ತೆ.
ನಕಲಿ ಬಿಲ್ ಸಾಗಾಟದ ತನಿಖೆಗಾಗಿ ‘ನ್ಯಾಷನಲ್ ಟ್ರಾವೆಲ್ಸ್’ ಸಂಸ್ಥೆಗೆ ನೋಟಿಸ್ ಜಾರಿ.
ತೆರಿಗೆ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಜನ ಪ್ರಮುಖ ವಂಚಕರ ಬಂಧನ.
ಏನಿದು ನಕಲಿ ಐಟಿಸಿ ಬಿಲ್ ದಂಧೆ?
ಮಹಾರಾಷ್ಟ್ರದ ಸ್ಕ್ರಾಪ್ (ಗುಜರಿ ವಸ್ತುಗಳು) ದಲ್ಲಾಳಿಗಳು ತೆರಿಗೆ ವಂಚಿಸುವ ಕಳ್ಳಮಾರ್ಗವನ್ನು ಕಂಡುಕೊಂಡಿದ್ದರು. ಕರ್ನಾಟಕದಿಂದ ಸ್ಕ್ರ್ಯಾಪ್ ಆಮದು ಮಾಡಿಕೊಳ್ಳುತ್ತಿರುವಂತೆ ನಕಲಿ ಕಂಪನಿಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಇವರು ಸೃಷ್ಟಿಸುತ್ತಿದ್ದರು. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಹೆಚ್ಚು ಬೇಡಿಕೆಯಿರುವ ‘ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್’ ಹೆಸರಿನಲ್ಲಿ ಈ ದಂಧೆ ಅವಿರಾಮವಾಗಿ ನಡೆಯುತ್ತಿತ್ತು.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವ ವಾಹನಗಳನ್ನು ಇದಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗಿತ್ತು. ನ್ಯಾಷನಲ್ ಟ್ರಾವೆಲ್ಸ್ ಗುತ್ತಿಗೆ ಪಡೆದಿದ್ದ ಲಾರಿಗಳೂ ಸೇರಿದಂತೆ ತಿಂಗಳಿಗೆ ಸುಮಾರು 20-25 ಭಾರಿ ಸರಕು ಸಾಗಣೆ (HGV) ವಾಹನಗಳಲ್ಲಿ ಸ್ಕ್ರ್ಯಾಪ್ ರವಾನೆಯಾಗುತ್ತಿದೆ ಎಂದು ಸುಳ್ಳು ‘ಇ-ವೇ ಬಿಲ್’ ಸೃಷ್ಟಿಸಲಾಗುತ್ತಿತ್ತು. ಆದರೆ ವಾಸ್ತವವಾಗಿ ಈ ವಾಹನಗಳಲ್ಲಿ ಯಾವುದೇ ಭೌತಿಕ ಸ್ಕ್ರ್ಯಾಪ್ ಇರುತ್ತಿರಲಿಲ್ಲ. ಕೇವಲ ನಕಲಿ ಬಿಲ್‌ಗಳು ಮಾತ್ರ ಹಂತ ಹಂತವಾಗಿ ಹಸ್ತಾಂತರಗೊಂಡು ಮಹಾರಾಷ್ಟ್ರ ತಲುಪುತ್ತಿದ್ದವು.
ಹಗರಣ ಬೆಳಕಿಗೆ ಬಂದಿದ್ದು ಹೇಗೆ?
ಬೆಂಗಳೂರಿನಲ್ಲಿ ಟಂಗ್‌ಸ್ಟನ್ ಸ್ಕ್ರ್ಯಾಪ್ ಅಷ್ಟಾಗಿ ಸಿಗದೇ ಇದ್ದರೂ, ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ರಫ್ತಾಗಿರುವ ದಾಖಲೆಗಳು ಸೃಷ್ಟಿಯಾಗಿದ್ದವು. ಇದೇ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಯಿತು. ಕೇವಲ ಕಾಗದದ ಮೇಲೆ ಸುಮಾರು 217 ಕೋಟಿ ರೂ. ವಹಿವಾಟು ನಡೆಸಿ, 39 ಕೋಟಿ ರೂ. ತೆರಿಗೆ ಬಿಲ್ ಸೃಷ್ಟಿಸಿದ್ದನ್ನು ಗಮನಿಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ತನಿಖೆಗೆ ಮುಂದಾದಾಗ ಇಡೀ ಜಾಲದ ಕರಾಳ ಮುಖ ಅನಾವರಣಗೊಂಡಿದೆ.
127 ನಕಲಿ ಸಂಸ್ಥೆಗಳ ಜಾಲ: ಮತ್ತಿಬ್ಬರ ಬಂಧನ
ಈ ದಂಧೆಗೆ ಸಂಬಂಧಿಸಿದಂತೆ ಜನವರಿ ತಿಂಗಳಿನಲ್ಲಿ ಐವರನ್ನು ಬಂಧಿಸಲಾಗಿತ್ತು. ಸದ್ಯ ತನಿಖೆಯನ್ನು ತೀವ್ರಗೊಳಿಸಿರುವ ಅಧಿಕಾರಿಗಳು ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ‘ಎಸ್‌ಕೆಎಸ್ ಟ್ರೇಡರ್ಸ್’ನ ಸಲೀಮುಲ್ಲಾ ಹಾಗೂ ‘ಕೆಎಚ್ ಇ-ವೇಸ್ಟ್ ಸೈಕ್ಲರ್’ನ ಹಸನ್ ಬೇಗ್ ಬಂಧಿತರು.
ಈ ಎರಡು ಸಂಸ್ಥೆಗಳು ಬರೋಬ್ಬರಿ 2,384 ಕೋಟಿ ರೂ. ವಹಿವಾಟು ನಡೆಸಿ, 594 ಕೋಟಿ ರೂ. ಐಟಿಸಿ ಬಿಲ್ ಪಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಅದರಲ್ಲಿಯೂ ಎಸ್‌ಕೆಎಸ್ ಟ್ರೇಡರ್ಸ್‌ನ ವಹಿವಾಟು ಕೇವಲ ಮೂರು ವರ್ಷಗಳಲ್ಲಿ 50 ಕೋಟಿಯಿಂದ ಬರೋಬ್ಬರಿ 945 ಕೋಟಿ ರೂಪಾಯಿಗೆ ರಾಕೆಟ್ ವೇಗದಲ್ಲಿ ಏರಿಕೆಯಾಗಿತ್ತು.
ಅಸ್ತಿತ್ವದಲ್ಲೇ ಇರದ ಕಂಪನಿಗಳು!
ಆಘಾತಕಾರಿ ವಿಷಯವೆಂದರೆ ದಾಖಲೆಗಳಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ತೋರಿಸಿರುವ ಈ ಸಂಸ್ಥೆಗಳಲ್ಲಿ ಭೌತಿಕವಾಗಿ ಯಾವುದೇ ಸರಕು ಸಾಗಾಟವಾಗಲಿ ಅಥವಾ ಸಿಬ್ಬಂದಿಯಾಗಲಿ ಇರಲಿಲ್ಲ. ಒಟ್ಟಾರೆ ತನಿಖೆಯಲ್ಲಿ ಇಂತಹ 127 ನಕಲಿ ಸಂಸ್ಥೆಗಳ ಬೃಹತ್ ಜಾಲ ಅಸ್ತಿತ್ವದಲ್ಲಿರುವುದು ಪತ್ತೆಯಾಗಿದ್ದು, ಸದ್ಯ ನ್ಯಾಯಾಲಯದ ಆದೇಶದ ಮೇರೆಗೆ ಒಟ್ಟು 7 ಜನರನ್ನು ಬಂಧಿಸಿ ಇಲಾಖೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಸಚಿವರ ಟ್ರಾವೆಲ್ಸ್ ಸಂಸ್ಥೆಗೆ ನೋಟಿಸ್ ಹೋಗಿರುವುದು ಈಗ ರಾಜಕೀಯ ಹಾಗೂ ವಾಣಿಜ್ಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.




