CBSE ಭಾಷಾ ನೀತಿ ಬದಲು: 9 ಮತ್ತು 10ನೇ ತರಗತಿಗೆ 3 ಭಾಷೆ ಕಡ್ಡಾಯ!

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (NCF-SE) 2023ರ ಆಶಯಕ್ಕೆ ಅನುಗುಣವಾಗಿ, ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (CBSE) 9 ಮತ್ತು 10ನೇ ತರಗತಿಗಳ ಭಾಷಾ ಕಲಿಕಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ. ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮಕ್ಕೆ ಪೂರಕವಾಗಿ ಸಿದ್ಧಪಡಿಸಲಾದ ಈ ನೂತನ ನಿಯಮಗಳು ಮುಂಬರುವ ಜುಲೈ 1, 2026 ರಿಂದ ಜಾರಿಗೆ ಬರಲಿವೆ ಎಂದು ಮಂಡಳಿಯ ಶೈಕ್ಷಣಿಕ ವಿಭಾಗದ ನಿರ್ದೇಶಕಿ ಪ್ರೊ. ಪ್ರಗ್ಯಾ ಎಂ. ಸಿಂಗ್ ತಿಳಿಸಿದ್ದಾರೆ.

1. ಮೂರು ಭಾಷೆಗಳ ಕಲಿಕೆ ಕಡ್ಡಾಯ: ಎರಡು ಭಾರತೀಯ ಭಾಷೆ ಇರಲೇಬೇಕು

ಹೊಸ ನಿಯಮದ ಪ್ರಕಾರ, ಪ್ರೌಢಶಾಲಾ ಹಂತದಲ್ಲಿ (Secondary Stage) ವಿದ್ಯಾರ್ಥಿಗಳು ಒಟ್ಟು ಮೂರು ಭಾಷೆಗಳನ್ನು (R1, R2, R3) ಕಡ್ಡಾಯವಾಗಿ ಕಲಿಯಬೇಕಾಗುತ್ತದೆ.

  • ಭಾರತೀಯ ಭಾಷೆಗಳಿಗೆ ಆದ್ಯತೆ: ಈ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಕಡ್ಡಾಯವಾಗಿ ಸ್ಥಳೀಯ ಭಾರತೀಯ ಭಾಷೆಗಳೇ (Native Indian Languages) ಆಗಿರಬೇಕು.

  • ವಿದೇಶಿ ಭಾಷೆಯ ಆಯ್ಕೆ: ವಿದ್ಯಾರ್ಥಿಗಳು ವಿದೇಶಿ ಭಾಷೆಯನ್ನು ಆರಿಸಿಕೊಳ್ಳಲು ಬಯಸಿದರೆ, ಅದನ್ನು ಕೇವಲ 3ನೇ ಭಾಷೆಯಾಗಿ (R3) ಮಾತ್ರ ಆಯ್ಕೆ ಮಾಡಬಹುದು (ಉಳಿದೆರಡೂ ಭಾರತೀಯ ಭಾಷೆಗಳಾಗಿದ್ದಲ್ಲಿ ಮಾತ್ರ). ಅಥವಾ ಅದನ್ನು ಹೆಚ್ಚುವರಿ 4ನೇ ವಿಷಯವಾಗಿಯೂ ತೆಗೆದುಕೊಳ್ಳಬಹುದು.

2. ಪರೀಕ್ಷಾ ಒತ್ತಡ ಮುಕ್ತ: ಮೂರನೇ ಭಾಷೆಗೆ ಬೋರ್ಡ್ ಪರೀಕ್ಷೆಯಿಲ್ಲ!

ವಿದ್ಯಾರ್ಥಿಗಳ ಮೇಲಿನ ಅತಿಯಾದ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ಸಿಬಿಎಸ್‌ಇ ಅತ್ಯಂತ ಪ್ರಮುಖ ನಿರ್ಧಾರ ಕೈಗೊಂಡಿದೆ. 10ನೇ ತರಗತಿಯ ಮಟ್ಟದಲ್ಲಿ ಮೂದನೇ ಭಾಷೆಗೆ (R3) ಯಾವುದೇ ಅಧಿಕೃತ ಬೋರ್ಡ್ ಪರೀಕ್ಷೆಗಳು ಇರುವುದಿಲ್ಲ. * R3 ಭಾಷೆಯ ಎಲ್ಲಾ ಮೌಲ್ಯಮಾಪನಗಳು ಸಂಪೂರ್ಣವಾಗಿ ಶಾಲಾ ಮಟ್ಟದಲ್ಲೇ ಆಂತರಿಕವಾಗಿ (School-based and Internal) ನಡೆಯಲಿವೆ.

  • ವಿದ್ಯಾರ್ಥಿಗಳು ಈ ವಿಷಯದಲ್ಲಿ ಪಡೆದ ಪ್ರದರ್ಶನವನ್ನು ಸಿಬಿಎಸ್‌ಇ ನೀಡುವ ಅಂತಿಮ ಪ್ರಮಾಣಪತ್ರದಲ್ಲಿ (Certificate) ದಾಖಲಿಸಲಾಗುತ್ತದೆ.

  • ಅತ್ಯಂತ ಮುಖ್ಯವಾಗಿ, ಈ ಮೂರನೇ ಭಾಷೆಯ (R3) ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯನ್ನು 10ನೇ ತರಗತಿಯ ಮುಖ್ಯ ಬೋರ್ಡ್ ಪರೀಕ್ಷೆಗೆ ಹಾಜರಾಗದಂತೆ ತಡೆಯಲಾಗುವುದಿಲ್ಲ (Barred) ಎಂದು ಮಂಡಳಿ ಸ್ಪಷ್ಟಪಡಿಸಿದೆ.

3. ಶಿಕ್ಷಕರ ಕೊರತೆ ನೀಗಿಸಲು ಶಾಲೆಗಳಿಗೆ ಸ್ವಾಯತ್ತತೆ ಮತ್ತು ವಿನಾಯಿತಿ

ಹೊಸ ನಿಯಮ ಜಾರಿಯಿಂದ ಶಾಲೆಗಳಿಗೆ ಅರ್ಹ ಭಾಷಾ ಶಿಕ್ಷಕರ ಕೊರತೆ ಎದುರಾದರೆ, ಅದನ್ನು ನಿವಾರಿಸಲು ಸಿಬಿಎಸ್‌ಇ ಹಲವು ತಾತ್ಕಾಲಿಕ ಮತ್ತು ನಮ್ಯತೆಯ (Flexible) ಆಯ್ಕೆಗಳನ್ನು ನೀಡಿದೆ:

  • ಶಾಲೆಗಳು ಹೈಬ್ರಿಡ್ ಅಥವಾ ವರ್ಚುವಲ್ ಬೋಧನಾ ವಿಧಾನವನ್ನು ಬಳಸಬಹುದು.

  • ‘ಸಹೋದಯ ಶಾಲಾ ಕ್ಲಸ್ಟರ್‌ಗಳ’ (Sahodaya clusters) ಮೂಲಕ ಇತರ ಶಾಲೆಗಳೊಂದಿಗೆ ಭಾಷಾ ಶಿಕ್ಷಕರ ಸಂಪನ್ಮೂಲವನ್ನು ಹಂಚಿಕೊಳ್ಳಬಹುದು.

  • ನಿವೃತ್ತ ಭಾಷಾ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಬಹುದು ಅಥವಾ ಆಯಾ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಇತರ ವಿಷಯಗಳ ಅರ್ಹ ಶಿಕ್ಷಕರನ್ನು ಬಳಸಿಕೊಳ್ಳಬಹುದು.

  • ಶಾಲೆಗಳು ಸಿಬಿಎಸ್‌ಇ ಅನುಮೋದಿತ ಪಟ್ಟಿಯಿಂದ ಯಾವುದೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಜೂನ್ 30, 2026 ರೊಳಗೆ ತಮ್ಮ ಶಾಲೆ ನೀಡುವ R3 ಭಾಷೆಯ ವಿವರವನ್ನು OASIS ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ಅಪ್‌ಡೇಟ್ ಮಾಡಬೇಕಾಗುತ್ತದೆ.

4. ಸದ್ಯಕ್ಕೆ 6ನೇ ತರಗತಿಯ ಪಠ್ಯಪುಸ್ತಕಗಳ ಬಳಕೆ

ಪ್ರೌಢಶಾಲಾ ಹಂತದ (R3) ನಿಗದಿತ ಹೊಸ ಪಠ್ಯಪುಸ್ತಕಗಳು ಲಭ್ಯವಾಗುವವರೆಗೆ, 9ನೇ ತರಗತಿಯ ವಿದ್ಯಾರ್ಥಿಗಳು ಸದ್ಯಕ್ಕೆ 2026-27ರ ಆವೃತ್ತಿಯ 6ನೇ ತರಗತಿಯ R3 ಪಠ್ಯಪುಸ್ತಕಗಳನ್ನು ಬಳಸಲಿದ್ದಾರೆ. ಸಿಬಿಎಸ್‌ಇ ಒಟ್ಟು 19 ಪರಿಶಿಷ್ಟ ಭಾಷೆಗಳ ಪಠ್ಯಪುಸ್ತಕಗಳನ್ನು ಜುಲೈ 1 ರೊಳಗೆ ಶಾಲೆಗಳಿಗೆ ಲಭ್ಯವಾಗುವಂತೆ ಮಾಡಲಿದೆ. ಇವುಗಳ ಜೊತೆಗೆ ಪ್ರಾದೇಶಿಕ ಅಥವಾ ಸ್ಥಳೀಯ ಸಾಹಿತ್ಯಗಳಾದ ಕವಿತೆಗಳು, ಸಣ್ಣ ಕಥೆಗಳನ್ನು ಶಾಲೆಗಳು ಪೂರಕವಾಗಿ ಬಳಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದ ವಿವರವಾದ ಬೋಧನಾ ಮಾರ್ಗಸೂಚಿಗಳನ್ನು ಮಂಡಳಿಯು ಜೂನ್ 15, 2026 ರೊಳಗೆ ಬಿಡುಗಡೆ ಮಾಡಲಿದೆ.

5. ವಿಶೇಷ ವಿನಾಯಿತಿಗಳು (Exemptions)

ಕೆಲವು ವಿಶೇಷ ಸಂದರ್ಭಗಳಲ್ಲಿ ಸಿಬಿಎಸ್‌ಇ ಭಾಷಾ ನೀತಿಯಿಂದ ವಿನಾಯಿತಿ ನೀಡಿದೆ:

  • ವಿಶೇಷ ಅಗತ್ಯವಿರುವ ಮಕ್ಕಳು (CwSN): ದಿವ್ಯಾಂಗ ಕಾಯ್ದೆ (RPwD Act, 2016) ಅನ್ವಯ ಇಂತಹ ಮಕ್ಕಳಿಗೆ ಎರಡನೇ ಅಥವಾ ಮೂರನೇ ಭಾಷೆಯಿಂದ ವಿನಾಯಿತಿ ನೀಡಬಹುದು.

  • ವಿದೇಶದಲ್ಲಿರುವ ಶಾಲೆಗಳು: ಭಾರತದ ಹೊರಗಿರುವ ಸಿಬಿಎಸ್‌ಇ ಶಾಲೆಗಳಿಗೆ ವಿನಾಯಿತಿ ಇರಲಿದೆ.

  • ವಿದೇಶದಿಂದ ಮರಳುವ ವಿದ್ಯಾರ್ಥಿಗಳು: ವಿದೇಶಗಳಿಂದ ಭಾರತಕ್ಕೆ ಬರುವ ವಿದ್ಯಾರ್ಥಿಗಳಿಗೆ ಪರಿಸ್ಥಿತಿಯ ಆಧಾರದ ಮೇಲೆ (Case-by-case) ಎರಡು ಭಾರತೀಯ ಭಾಷೆಗಳ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಲು ಅವಕಾಶವಿದೆ.

ಕಟ್ಟುನಿಟ್ಟಿನ ಜಾರಿಗಿಂತ ಆನಂದದಾಯಕ ಕಲಿಕೆಗೆ ಆದ್ಯತೆ

2026ರ ಏಪ್ರಿಲ್‌ನಿಂದಲೇ ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಂತ-ಹಂತವಾಗಿ ಬದಲಾವಣೆ ತರಲು ಈ ‘ಪರಿವರ್ತನಾ ವಿಧಾನವನ್ನು’ (Transitional approach) ಅಳವಡಿಸಿಕೊಳ್ಳಲಾಗಿದೆ. ಪರೀಕ್ಷೆಯ ಒತ್ತಡವನ್ನು ಹೇರದೆ, ವಿದ್ಯಾರ್ಥಿಗಳಲ್ಲಿ ಬಹುಭಾಷಾ ಪ್ರಾವೀಣ್ಯತೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದನ್ನು ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಕಾರಾತ್ಮಕವಾಗಿ ತಲುಪಿಸಲು ಶಾಲೆಗಳಿಗೆ ಸೂಚಿಸಲಾಗಿದೆ.

ಯಾವುದೇ ಗೊಂದಲಗಳಿದ್ದಲ್ಲಿ ಶಾಲೆಗಳು ಸಿಬಿಎಸ್‌ಇ ಶೈಕ್ಷಣಿಕ ವಿಭಾಗವನ್ನು (cq2026-27@cbeshiksha.in ಅಥವಾ 011-24050612) ಸಂಪರ್ಕಿಸಬಹುದಾಗಿದೆ.