ಹಾಸನ: ತಾಲೂಕು ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಹಂಚಿಕೆ ಮಾಡಿದ ಗಂಭೀರ ಆರೋಪದ ಮೇಲೆ, ಬೇಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರನ್ನು ಅಪರಾಧ ತನಿಖಾ ದಳ (CID) ಅಧಿಕಾರಿಗಳು ಶುಕ್ರವಾರ ಮುಂಜಾನೆ ಬಂಧಿಸಿದ್ದಾರೆ. 2023ರಲ್ಲಿ ದಾಖಲಾಗಿದ್ದ ಈ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ, ಸದ್ಯ ಮಾಜಿ ಶಾಸಕರನ್ನು ಕಸ್ಟಡಿಗೆ ಪಡೆದಿದೆ.
ದೂರಿನ ವಿವರ: ಕೆ.ಎಸ್. ಲಿಂಗೇಶ್ ಅವರು ಸಮಿತಿಯ ಮುಖ್ಯಸ್ಥರಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು, ನಕಲಿ ದಾಖಲೆಗಳ ನೆರವಿನಿಂದ ನೈಜ ಅರ್ಹರಿಲ್ಲದ ಸುಮಾರು 1,430 ಬೋಗಸ್ ಜನರಿಗೆ ಬರೋಬ್ಬರಿ 2,750 ಎಕರೆ ಸರ್ಕಾರಿ ಜಮೀನನ್ನು ನಿಯಮಬಾಹಿರವಾಗಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕೋಟ್ಯಂತರ ರೂಪಾಯಿ ಮೌಲ್ಯದ ಭೂ ಹಗರಣದ ಕುರಿತು ಕೋಲಾರ ಮೂಲದ ಸಾಮಾಜಿಕ ಹೋರಾಟಗಾರ ಕೆ.ಸಿ. ರಾಜಣ್ಣ ಎಂಬುವವರು ಬೇಲೂರು ಇಲಾಖೆಗೆ ದೂರು ಸಲ್ಲಿಸಿದ್ದರು. ಪ್ರಾಥಮಿಕ ತನಿಖೆಯ ಬಳಿಕ ಪ್ರಕರಣದ ಆಳ-ಅಗಲವನ್ನು ಮನಗಂಡು ಇದನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು.
ಬಿಗಿಗೊಂಡ ಕಾನೂನು ಉರುಳು:
ಈ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕರು ಹಾಗೂ ಇತರ ಅಧಿಕಾರಿ/ಮಧ್ಯವರ್ತಿಗಳ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (ಹಿಂದಿನ ಐಪಿಸಿ ಸೆಕ್ಷನ್ 420, 409, 464, 465, 468, 471 ಹಾಗೂ 120(ಬಿ)) ವಿವಿಧ ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿತ್ತು.
ಜಾಮೀನು ಅರ್ಜಿಗಳು ವಜಾ:
ತಮ್ಮ ಮೇಲಿನ ಎಫ್‌ಐಆರ್ ರದ್ದು ಕೋರಿ ಲಿಂಗೇಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ, ನ್ಯಾಯಾಲಯವು ತನಿಖೆಗೆ ತಡೆಯಾಜ್ಞೆ ನೀಡದೆ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಇವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು.
ನ್ಯಾಯಾಲಯಗಳಿಂದ ಯಾವುದೇ ಕಾನೂನು ರಕ್ಷಣೆ ಸಿಗದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಾಜಿ ಶಾಸಕರನ್ನು ವಶಕ್ಕೆ ಪಡೆದಿದ್ದಾರೆ. ಈ ಜಮೀನು ಹಗರಣದಲ್ಲಿ ಭಾಗಿಯಾಗಿರುವ ಇನ್ನೂ ಕೆಲವು ಪ್ರಮುಖರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.




