ಶಿವಮೊಗ್ಗ: ಸಾಗರ ವಿಜ್ಞಾನ ವೇದಿಕೆಯ ವತಿಯಿಂದ ಹಿರಿಯ ವಿಜ್ಞಾನಿ ಪ್ರೊ. ಹೆಚ್.ಎಲ್.ಎಸ್. ರಾವ್ ಅವರ ಸ್ಮರಣಾರ್ಥ ಪ್ರಥಮ ದತ್ತಿ ಉಪನ್ಯಾಸ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜೂನ್ 28ರ ಭಾನುವಾರದಂದು ಸಾಗರದ ಹೆಚ್.ಕೆ.ಹೆಚ್ ಲೇಔಟ್ ನಲ್ಲಿ ಇರುವಂತ ಸಾಗರ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷರು ಮತ್ತು ವಿಜ್ಞಾನಿಗಳಾದ ಡಾ. ಹೆಚ್.ಎಸ್. ಜೀವನ್ ಹಾಗೂ ನಿರ್ದೇಶಕರಾದ ವಿ.ಸಿ. ಪಾಟೀಲ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರಥಮ ವಿಜ್ಞಾನ ದತ್ತಿ ಉಪನ್ಯಾಸ
ಸಾಹಿತ್ಯ ಹಾಗೂ ಇತರೆ ಕ್ಷೇತ್ರಗಳಲ್ಲಿ ದತ್ತಿ ಉಪನ್ಯಾಸಗಳು ಸಾಮಾನ್ಯವಾಗಿದ್ದರೂ, ವಿಜ್ಞಾನ ಕ್ಷೇತ್ರದಲ್ಲಿ ಇದು ತೀರಾ ವಿರಳವಾಗಿದೆ. ಸಾಗರ ವಿಜ್ಞಾನ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಪ್ರೊ. ಹೆಚ್.ಎಲ್.ಎಸ್. ರಾವ್ ಅವರ ನೆನಪಿನಲ್ಲಿ, ಅವರ ಪುತ್ರ ಸಂಜಯ್ ಹೆಸ್ತಕ್ ಅವರ ಆರ್ಥಿಕ ನೆರವಿನೊಂದಿಗೆ ಈ ವಿಶೇಷ ದತ್ತಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ಜೂನ್ ತಿಂಗಳ ಕೊನೆಯ ಭಾನುವಾರದಂದು ಈ ವಿಜ್ಞಾನ ದತ್ತಿ ಉಪನ್ಯಾಸ ಕಾರ್ಯಕ್ರಮವು ನಿರಂತರವಾಗಿ ನಡೆಯಲಿದೆ ಎಂದು ಅಧ್ಯಕ್ಷ ಡಾ.ಹೆಚ್.ಎಸ್.ಜೀವನ್ ತಿಳಿಸಿದರು.
ಮುಖ್ಯ ಉಪನ್ಯಾಸಕರು ಮತ್ತು ಅತಿಥಿಗಳು
ಈ ಬಾರಿಯ ಪ್ರಥಮ ದತ್ತಿ ಉಪನ್ಯಾಸವನ್ನು ದೇಶದ ಪ್ರತಿಷ್ಠಿತ ವಿಜ್ಞಾನಿ, ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪುರಸ್ಕೃತರು ಹಾಗೂ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ (NCBS) ನಿರ್ದೇಶಕರಾದ ಪ್ರೊ. ಎಲ್.ಎಸ್. ಶಶಿಧರ ಅವರು ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪ್ಪ ಎಸ್. ಗುಂಡಪ್ಪಳ್ಳಿ, ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸದಾನಂದ ಸ್ವಾಮಿ.ಸಿ ಹಾಗೂ ಉದ್ಯಮಿ ಮತ್ತು ವೇದಿಕೆಯ ಸಂಚಾಲಕ ಚಂದ್ರಶೇಖರ್ ಕಾಕಾಲ್ ಅವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಒಟ್ಟಾರೆ ಅಧ್ಯಕ್ಷತೆಯನ್ನು ಡಾ. ಹೆಚ್.ಎಸ್. ಜೀವನ್ ಅವರು ವಹಿಸಿಕೊಳ್ಳಲಿದ್ದಾರೆ ಎಂದರು.
ಮೂವರು ಶಿಕ್ಷಕರಿಗೆ ಸನ್ಮಾನ
ವೇದಿಕೆಯ ನಿರ್ದೇಶಕರಾದ ವಿ.ಸಿ.ಪಾಟೀಲ್ ಅವರಿ ಪ್ರೊ. ಹೆಚ್.ಎಲ್.ಎಸ್. ರಾವ್ ಅವರ ಸ್ಮರಣಾರ್ಥವಾಗಿ ಈ ಬಾರಿ ಮೂರು ಹಂತದ ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಪ್ರಾಥಮಿಕ ಶಾಲಾ ವಿಭಾಗದಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಹಾಲಯ್ಯ, ಪ್ರೌಢಶಾಲಾ ವಿಭಾಗದಿಂದ ಸಾವಿಕೇರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಗಣೇಶ್ ವಿ ಹೆಗಡೆ ಹಾಗೂ ಪದವಿಪೂರ್ವ ವಿಭಾಗದಿಂದ ಹೊಸನಗರದ ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ನಾಗೇಶ್.ಜಿ.ಎಸ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.
ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು
ಮುಂದಿನ ತಿಂಗಳು 6ನೇ ತಾರೀಖಿನಿಂದ 10ನೇ ತಾರೀಖಿನವರೆಗೆ ಸಾಗರ, ಹೊಸನಗರ, ಶಿಕಾರಿಪುರ ಮತ್ತು ಸೊರಬ ಭಾಗದ ಸುಮಾರು 50 ಪದವಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಆಯ್ದುಕೊಂಡು ಅವರಿಗೆ ಐದು ದಿನಗಳ ಉಚಿತ ತರಬೇತಿ ನೀಡಲಾಗುವುದು. ಈ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಪ್ರಸ್ತುತ ದಿನಗಳಲ್ಲಿ ತೀರಾ ಅವಶ್ಯಕವಾಗಿರುವ AI (ಕೃತಕ ಬುದ್ಧಿಮತ್ತೆ) ಮತ್ತು ಪೈಥಾನ್ ವಿಷಯಗಳ ಕುರಿತು ತಜ್ಞರಿಂದ ತರಬೇತಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿಗೆ ಶೈಕ್ಷಣಿಕ ಪ್ರವಾಸ
ಜುಲೈ ತಿಂಗಳ ಅಂತ್ಯದ ವೇಳೆಗೆ ಹಂತ ಹಂತವಾಗಿ ಹೈಸ್ಕೂಲ್, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುವ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 25 ಹೈಸ್ಕೂಲ್ ವಿದ್ಯಾರ್ಥಿಗಳನ್ನು ಬೆಂಗಳೂರಿನ ಪ್ರಸಿದ್ಧ ಜವಾಹರ್ ಲಾಲ್ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರ (JNCASR), ಪ್ಲಾನೆಟೋರಿಯಂ, ವಿಶ್ವೇಶ್ವರಯ್ಯ ಮ್ಯೂಸಿಯಂ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಂಸ್ಥೆಗಳಿಗೆ ಕರೆದೊಯ್ದು ಅಲ್ಲಿನ ವಿಜ್ಞಾನಿಗಳ ಕಾರ್ಯವೈಖರಿಯನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಕಲ್ಪಿಸಲಾಗುವುದು. ಈ ಪ್ರವಾಸಕ್ಕೆ ಕೇವಲ ಪ್ರಯಾಣದ ವೆಚ್ಚ ಮಾತ್ರ ಪಡೆಯಲಾಗುತ್ತಿದ್ದು, ಎರಡು ದಿನಗಳ ಉಳಿದುಕೊಳ್ಳುವ ಹಾಗೂ ಊಟದ ವ್ಯವಸ್ಥೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು ಎಂದರು.
ವಿಜ್ಞಾನ ಕೇಂದ್ರ ಮತ್ತು ಸೈನ್ಸ್ ಪಾರ್ಕ್
ಸಾಗರದಲ್ಲಿ ಸಾಗರ ವಿಜ್ಞಾನ ವೇದಿಕೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ವಿಜ್ಞಾನ ಕೇಂದ್ರದ ಕಾಮಗಾರಿಗಳು ಸದ್ಯ ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ಇದು ಲೋಕಾರ್ಪಣೆಗೊಳ್ಳಲಿದೆ. ಈ ಕೇಂದ್ರಕ್ಕೆ ಭೇಟಿ ನೀಡಿದ ದಾನಿಗಳ ನೆರವಿನೊಂದಿಗೆ ಇಲ್ಲಿ ಸುಸಜ್ಜಿತ ಸೈನ್ಸ್ ಪಾರ್ಕ್ ಹಾಗೂ ಡಿಜಿಟಲ್ ಲೈಬ್ರರಿಯನ್ನು ಒಳಗೊಂಡ ಚಿಕ್ಕದಾದ ಪ್ಲಾನೆಟೋರಿಯಂ (ತಾರಾಲಯ) ಒಂದನ್ನು ಸ್ಥಾಪಿಸುವ ಯೋಜನೆ ಚಾಲ್ತಿಯಲ್ಲಿದೆ ಎಂದು ಅವರು ಹೇಳಿದರು.
ವಿಜ್ಞಾನದ ಬಗ್ಗೆ ಆಸಕ್ತಿಯುಳ್ಳ ಸಾಗರದ ನಾಗರಿಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜೂನ್ 28ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಪ್ರಯೋಜನ ಪಡೆಯಬೇಕಾಗಿ ಮನವಿ ಮಾಡಿದರು. ಕಾರ್ಯಕ್ರಮ ಮುಗಿದ ತಕ್ಷಣ ಆಗಮಿಸಿದ ಎಲ್ಲಾ ಸಾರ್ವಜನಿಕರಿಗೂ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಹೇಮಂತ್ ಹೆಗಡೆ ಹಾಗೂ ತಿಮ್ಮಪ್ಪ ಬಿ.ಎಲ್ ಉಪಸ್ಥಿತರಿದ್ದರು.



