ಬೆಂಗಳೂರು: ಪತಿಗೆ ಬಿಸಿಯಾದ ದೋಸೆ ಹಾಗೂ ರಾಗಿ ಮುದ್ದೆ ಮಾಡಿ ಕೊಡುವಂತೆ ಅತ್ತೆ ಕೇಳುವುದು ಅಥವಾ ಕಿರುಕುಳದ ನೆಪದಲ್ಲಿ ತಲೆಕೂದಲು ಉದುರುವುದು ಎಂದಿಗೂ ವರದಕ್ಷಿಣೆ ಕಿರುಕುಳ ಎನಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬರ ವೈಯಕ್ತಿಕ ದೂರುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ‘ಕ್ರೌರ್ಯ’ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೊಸೆಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ತಮ್ಮ ಮೇಲಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಅತ್ತೆ ಮತ್ತು ಅವರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಪ್ರಮುಖ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೆಂಡತಿ ನ್ಯಾಯಾಲಯದಲ್ಲಿ ಮಂಡಿಸಿದ ಆರೋಪಗಳು:
ವಿಚಾರಣೆ ವೇಳೆ ಖುದ್ದಾಗಿ ವಾದ ಮಂಡಿಸಿದ ಪತ್ನಿ, “ನನಗೆ ಪತಿಯ ಮನೆಯಲ್ಲಿ ತೀವ್ರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ನನಗೆ ಸರಿಯಾದ ಪೌಷ್ಟಿಕ ಆಹಾರ ನೀಡದೆ ಕೇವಲ ದೋಸೆ, ಅನ್ನ, ಸೊಪ್ಪು ಮತ್ತು ಬೇಳೆ ಸಾರನ್ನಷ್ಟೇ ಕೊಡುತ್ತಿದ್ದರು. ಆದರೆ ಕುಟುಂಬದ ಇತರರು ಪೌಷ್ಟಿಕ ಆಹಾರ ಸೇವಿಸುತ್ತಿದ್ದರು. ಈ ಕಿರುಕುಳದಿಂದಾಗಿಯೇ ನನ್ನ ತಲೆಕೂದಲು ಉದುರಿದೆ. ಅಷ್ಟೇ ಅಲ್ಲದೆ, ನನ್ನನ್ನು ಅಡುಗೆ ಮನೆಗೆ ಸೇರಿಸುತ್ತಿರಲಿಲ್ಲ. ನಾನು ಗಳಿಸುತ್ತಿದ್ದ ಇಡೀ ಸಂಬಳವನ್ನು ಗಂಡನಿಗೆ ನೀಡಬೇಕಿತ್ತು. ಅತ್ತೆಯು ಪತಿಯನ್ನು ತನ್ನ ಕೊಠಡಿಯಲ್ಲೇ ಮಲಗಿಸಿಕೊಳ್ಳುತ್ತಿದ್ದರಿಂದ ನಾನು ಐದೂವರೆ ತಿಂಗಳು ಏಕಾಂಗಿಯಾಗಿ ಕಾಲ ಕಳೆದು ಮನೆಯಿಂದ ಹೊರಬರಬೇಕಾಯಿತು,” ಎಂದು ಅಳಲು ತೋಡಿಕೊಂಡರು.
ಮುಂದುವರಿದು, “ನನ್ನ ತಾಯಿ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆ ಎಂದು ಅಪಪ್ರಚಾರ ಮಾಡಿ ನನ್ನ ಘನತೆಗೆ ಕುಂದು ತಂದಿದ್ದಾರೆ. ಹೀಗಾಗಿ ಅವರ ವಿರುದ್ಧ ಮಾನಹಾನಿ ಪ್ರಕರಣವನ್ನೂ ಹೂಡಿದ್ದೇನೆ,” ಎಂದು ಹೇಳಿದರು.
ಹೈಕೋರ್ಟ್ ಎತ್ತಿದ ಕಡಕ್ ಪ್ರಶ್ನೆಗಳು:
ಪತ್ನಿಯ ಸುದೀರ್ಘ ಹೇಳಿಕೆಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ಇಂತಹ ವಿಚಾರಗಳನ್ನು ಇಟ್ಟುಕೊಂಡು ಐಪಿಸಿ ಸೆಕ್ಷನ್ 498A (ವರದಕ್ಷಿಣೆ ಕಿರುಕುಳ) ಅನ್ವಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
“ಪತಿಯು ಬೆಳಿಗ್ಗೆ 10 ಗಂಟೆಗೆ ತಿಂಡಿ ತಿಂದ ನಂತರವೇ ನಾನು ಊಟ ಮಾಡಬೇಕಿತ್ತು ಎನ್ನುವುದು ಹಾಗೂ ಗಂಡನಿಗೆ ಬಿಸಿಯಾದ ದೋಸೆ, ರಾಗಿ ಮುದ್ದೆ ಮಾಡಿಕೊಡಿ ಎಂದು ಅತ್ತೆ ಕೇಳುವುದು ಅಪರಾಧವೇ? ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ದೂರುದಾರೆಯ ದೃಷ್ಟಿಯಲ್ಲಿನ ಪ್ರತಿಯೊಂದು ಅಹವಾಲು ಕಾನೂನಿನ ಅಡಿಯಲ್ಲಿ ಕ್ರೌರ್ಯ ಎನಿಸುವುದಿಲ್ಲ. ಇಂತಹ ಆರೋಪಗಳನ್ನು ವಿಚ್ಛೇದನ ಕೋರುವ ಅರ್ಜಿಯಲ್ಲಿ ಬಳಸಬಹುದೇ ಹೊರತು, ಇದನ್ನು ಕೌಟುಂಬಿಕ ದೌರ್ಜನ್ಯ ಅಥವಾ ವರದಕ್ಷಿಣೆ ಕಿರುಕುಳ ಎನ್ನಲಾಗುವುದಿಲ್ಲ,” ಎಂದು ಪೀಠ ತಿಳಿಸಿತು.
ಅಲ್ಲದೆ, “ಕಾನೂನು ಪ್ರಕಾರ ಯಾವುದು ಕ್ರೌರ್ಯವೋ ಅದು ಮಾತ್ರ ಕ್ರೌರ್ಯ. ಸಣ್ಣಪುಟ್ಟ ದೂರುಗಳನ್ನು ಅದಕ್ಕೆ ಹೋಲಿಸಲು ಬರುವುದಿಲ್ಲ. ನೀವು ಪರಸ್ಪರ ದೂರು-ಪ್ರತಿದೂರುಗಳನ್ನು ದಾಖಲಿಸಿಕೊಳ್ಳುವುದು ಕ್ರೌರ್ಯವಲ್ಲ. ಆದಾಗ್ಯೂ, ಈ ಪ್ರಕರಣದಲ್ಲಿ ಪತಿಯನ್ನು ಕ್ಷಮಿಸಲು ಸಾಧ್ಯವಿಲ್ಲ,” ಎಂದು ಪೀಠ ಸ್ಪಷ್ಟಪಡಿಸಿತು.
ಅಂತಿಮ ಆದೇಶ ಕಾಯ್ದಿರಿಸಿದ ನ್ಯಾಯಪೀಠ
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅನಗತ್ಯವಾಗಿ ಆರೋಪಿಗಳನ್ನಾಗಿ ಮಾಡಲಾಗಿರುವ ಅತ್ತೆ ಹಾಗೂ ಆಕೆಯ ಸಂಬಂಧಿಕರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿದರು. ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಪ್ರಕರಣದ ಅಂತಿಮ ಆದೇಶವನ್ನು ಕಾಯ್ದಿರಿಸಿದೆ.




