ಬೆಂಗಳೂರು: ನಗರದ ಕೇಂದ್ರ ಭಾಗದಲ್ಲಿರುವ ಐತಿಹಾಸಿಕ ಮತ್ತು ಪ್ರವಾಸಿ ಆಕರ್ಷಣೆಗಳಾದ ಬಾಲಭವನ, ಕೆಎಸ್‌ಟಿಡಿಸಿ ಮಯೂರ ಉಪಹಾರ ಗೃಹ, ಬೆಂಗಳೂರು ಸರ್ಕಾರಿ ಮ್ಯೂಸಿಯಂ ಹಾಗೂ ವೆಂಕಟಪ್ಪ ಕಲಾ ಗ್ಯಾಲರಿಗಳನ್ನು ಸಮಗ್ರವಾಗಿ ನವೀಕರಿಸಿ ಪ್ರವಾಸಿಗರಿಗೆ ಅತ್ಯುತ್ತಮ ಸೌಲಭ್ಯ ಒದಗಿಸಲು ಪ್ರವಾಸೋದ್ಯಮ ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ಅನಿರೀಕ್ಷಿತ ತಪಾಸಣೆ
ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಹಾಗೂ ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಇಲಾಖಾ ಆಯುಕ್ತ ಶಿವಪ್ರಸಾದ್ ಅವರೊಂದಿಗೆ ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿರುವ ಬಾಲಭವನದ ಮಯೂರ ಹೋಟೆಲ್‌ಗೆ ಸಚಿವರು ಹಠಾತ್ ಭೇಟಿ ನೀಡಿದರು. ಅಲ್ಲಿನ ಶುಚಿತ್ವ, ಆಹಾರದ ಗುಣಮಟ್ಟ, ಆತಿಥ್ಯ ಹಾಗೂ ನಿರ್ವಹಣಾ ವ್ಯವಸ್ಥೆಗಳನ್ನು ಸ್ಥಳದಲ್ಲೇ ಪರಿಶೀಲಿಸಿದರು.
₹2 ಕೋಟಿ ವೆಚ್ಚದಲ್ಲಿ ಹೋಟೆಲ್ ನವೀಕರಣ, ಮಕ್ಕಳ ಆಹಾರಕ್ಕೆ ಒತ್ತು
ಬಾಲಭವನಕ್ಕೆ ಕುಟುಂಬ ಸಮೇತ ಆಗಮಿಸುವ ಮಕ್ಕಳ ಸಂಖ್ಯೆ ಅಧಿಕವಾಗಿರುವುದರಿಂದ, ಅವರಿಗೆ ಸೂಕ್ತವಾದ ಆಹಾರ ಮತ್ತು ಹಿತಕರ ವಾತಾವರಣ ಒದಗಿಸುವ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು. ಈ ಉದ್ದೇಶಕ್ಕಾಗಿ ಸುಮಾರು ₹2 ಕೋಟಿ ಅನುದಾನದಲ್ಲಿ ಮಯೂರ ರೆಸ್ಟೋರೆಂಟ್ ಅನ್ನು ಆಧುನಿಕ ಶೈಲಿಯಲ್ಲಿ ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ. ಮೆನುವಿನಲ್ಲಿ ಮಕ್ಕಳು ಮೆಚ್ಚುವ ಪೌಷ್ಟಿಕ ಹಾಗೂ ರುಚಿಕರ ಆಹಾರ ಪದಾರ್ಥಗಳಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ಇದು ಕೆಎಸ್‌ಟಿಡಿಸಿಯ ಇತರೆ ಕೇಂದ್ರಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು. ಇದೇ ವೇಳೆ ಉಪಹಾರ ಗೃಹದ ಲೀಸ್ ಅವಧಿ ವಿಸ್ತರಿಸುವ ಬಗ್ಗೆ ಬಾಲಭವನದ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದರು.
ಮಕ್ಕಳೊಡನೆ ಸಂವಾದ, ಐಸ್‌ಕ್ರೀಂ ಹಂಚಿದ ಸಚಿವರು
ತಪಾಸಣೆಯ ನಡುವೆ ಬಾಲಭವನದಲ್ಲಿದ್ದ ಪುಟಾಣಿ ಮಕ್ಕಳೊಂದಿಗೆ ಸಚಿವ ಕೆ.ಜೆ. ಜಾರ್ಜ್ ಅವರು ಕುಶಲೋಪರಿ ವಿಚಾರಿಸಿ ಬೆರೆತರು. ಅವರ ಆಸಕ್ತಿ ಮತ್ತು ಆಹಾರದ ಅಭಿರುಚಿಗಳನ್ನು ತಿಳಿದುಕೊಂಡ ಸಚಿವರು, ಎಲ್ಲ ಮಕ್ಕಳಿಗೂ ಐಸ್‌ಕ್ರೀಂ ವಿತರಿಸಿ ಖುಷಿ ಹಂಚಿಕೊಂಡರು.
1865ರ ಐತಿಹಾಸಿಕ ಮ್ಯೂಸಿಯಂಗೆ 6 ತಿಂಗಳಲ್ಲಿ ಹೊಸ ರೂಪ
ದಕ್ಷಿಣ ಭಾರತದ ಎರಡನೇ ಅತ್ಯಂತ ಹಳೆಯ ವಸ್ತುಸಂಗ್ರಹಾಲಯವೆಂಬ ಹೆಗ್ಗಳಿಕೆ ಪಡೆದಿರುವ 1865ರ ಬೆಂಗಳೂರು ಸರ್ಕಾರಿ ಮ್ಯೂಸಿಯಂಗೆ ಭೇಟಿ ನೀಡಿದ ಸಚಿವರು, ಅಲ್ಲಿನ ನವೀಕರಣ ಪ್ರಕ್ರಿಯೆಯನ್ನು ಪರಿಶೀಲಿಸಿದರು. ನಾಡಿನ ಇತಿಹಾಸ ಮತ್ತು ಶ್ರೀಮಂತ ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸುವ ಈ ಕೇಂದ್ರದ ಕಾಮಗಾರಿಗಳನ್ನು ತ್ವರಿತಗೊಳಿಸಿ, ಮುಂದಿನ 6 ತಿಂಗಳ ಒಳಗಾಗಿ ಸಾರ್ವಜನಿಕರ ವೀಕ್ಷಣೆಗೆ ಸಂಪೂರ್ಣವಾಗಿ ಸಜ್ಜುಗೊಳಿಸುವಂತೆ ಗಡುವು ವಿಧಿಸಿದರು.
ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಬಿಗಿ ಭದ್ರತೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ
ಕೊನೆಯದಾಗಿ ವೆಂಕಟಪ್ಪ ಆರ್ಟ್ ಗ್ಯಾಲರಿಗೆ ತೆರಳಿ ಕಲಾಕೃತಿಗಳನ್ನು ವೀಕ್ಷಿಸಿದ ಸಚಿವರು, ಗ್ಯಾಲರಿಯಲ್ಲಿರುವ ಅಪರೂಪದ ಕಲಾ ಸಂಪತ್ತನ್ನು ರಕ್ಷಿಸಲು ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಸೂಚಿಸಿದರು. ಜೊತೆಗೆ ಕಲಾ ಪ್ರೇಮಿಗಳು ಮತ್ತು ಸಾರ್ವಜನಿಕರನ್ನು ಸೆಳೆಯಲು ನಿಯಮಿತವಾಗಿ ಕಲಾ ಪ್ರದರ್ಶನಗಳು, ಸೃಜನಶೀಲ ಕಾರ್ಯಾಗಾರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಕ್ತ ನೀಲನಕ್ಷೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.



