ವಂದೇ ಮಾತರಂ ಮೊದಲ 2 ಚರಣಗಳನ್ನು ಹಾಡಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯದಲ್ಲಿ ನಡೆಯುವ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಇನ್ನು ಮುಂದೆ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಸಚಿವ ಸಂಪುಟದ ತೀರ್ಮಾನದಂತೆ ಆದೇಶ: ಭಾರತದ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ಜನರಲ್ಲಿ ರಾಷ್ಟ್ರೀಯತೆ, ಏಕತೆ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವಲ್ಲಿ ‘ವಂದೇ ಮಾತರಂ’ ಗೀತೆಯು ಮಹತ್ವದ ಪಾತ್ರ ವಹಿಸಿದೆ. ಕೇಂದ್ರ ಗೃಹ ಸಚಿವಾಲಯವು ವಂದೇ ಮಾತರಂ ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿ ಹಾಗೂ ಅದರ ವಾದನ ಮತ್ತು ಸಾಮೂಹಿಕ ಗಾಯನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಆಧಾರದಲ್ಲಿ ರಾಜ್ಯದ ಸಚಿವ ಸಂಪುಟ ಕೈಗೊಂಡ ನಿರ್ಧಾರದಂತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ರಾಜಕೀಯ) ಈ ಕುರಿತು ಅಧಿಕೃತ ನಡವಳಿಗಳನ್ನು ಪ್ರಕಟಿಸಿದೆ.

ವಿಶೇಷ ಗಣ್ಯರ ಕಾರ್ಯಕ್ರಮಗಳಿಗೆ ವಿನಾಯಿತಿ: ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ/03/HCR/2026 (ಭಾಗ-2)ರ ಅನ್ವಯ, ಮಾನ್ಯ ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಅಧಿಕೃತ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂದು ರಾಜ್ಯಪಾಲರ ಆದೇಶಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ ಸಂದೀಪ್ ಬಿ.ಕೆ. ಅವರು ತಿಳಿಸಿದ್ದಾರೆ.

ಶಿಷ್ಟಾಚಾರ ಮತ್ತು ಏಕರೂಪತೆ ಪಾಲನೆಗೆ ಕ್ರಮ: ರಾಜ್ಯದಲ್ಲಿ ನಡೆಯುವ ವಿವಿಧ ಸರ್ಕಾರಿ ಸಮಾರಂಭಗಳ ಸ್ವರೂಪ ಮತ್ತು ಸಂದರ್ಭಕ್ಕೆ ಅನುಗುಣವಾಗಿ ವಂದೇ ಮಾತರಂ ಗೀತೆಯ ಗಾಯನ/ವಾದನದಲ್ಲಿ ಏಕರೂಪತೆ, ಗೌರವ ಮತ್ತು ಸೂಕ್ತ ಶಿಷ್ಟಾಚಾರವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.