ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ 869 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಸೂಚನೆ ಹೊರಡಿಸಿದೆ.
ಕಲ್ಯಾಣ ಕರ್ನಾಟಕಕ್ಕೆ 293 ಹುದ್ದೆ ಮೀಸಲು
ಒಟ್ಟು ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 293 ಹಾಗೂ ಉಳಿಕೆ ಮೂಲ ವೃಂದಕ್ಕೆ 576 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಮೂಲ ವೃಂದದಲ್ಲಿ 560 ವಾರ್ಡರ್ ಮತ್ತು 16 ದ್ವಿತೀಯ ದರ್ಜೆ ಬೋಧಕ ಹುದ್ದೆಗಳು ಲಭ್ಯವಿವೆ. ಇನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ 275 ವಾರ್ಡರ್, 8 ದ್ವಿತೀಯ ದರ್ಜೆ ಬೋಧಕ, 5 ಜೈಲರ್ ಹಾಗೂ 5 ವಾರ್ಡರ್ ಕಮ್ ನರ್ಸಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ ಹಾಗೂ ವಯಸ್ಸಿನ ಮಿತಿ
ಜೈಲರ್ ಹುದ್ದೆಗೆ ಪದವೀಧರರು, ವಾರ್ಡರ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ದರ್ಜೆ ಬೋಧಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಥವಾ ಡಿಪ್ಲೊಮಾ ಪೂರೈಸಿರಬೇಕು. ವಾರ್ಡರ್ ಕಮ್ ನರ್ಸಿಂಗ್ ಹುದ್ದೆಯ ಆಕಾಂಕ್ಷಿಗಳು ಎಸ್‌ಎಸ್‌ಎಲ್‌ಸಿ ಜತೆಗೆ ಪ್ರಥಮ ಚಿಕಿತ್ಸಾ ತರಬೇತಿ ಪ್ರಮಾಣಪತ್ರ ಪಡೆದಿರುವುದು ಕಡ್ಡಾಯ. ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ ವಯಸ್ಸು 33 ವರ್ಷದೊಳಗಿರಬೇಕು.
ನೆಗೆಟಿವ್ ಮಾರ್ಕಿಂಗ್ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಕಡ್ಡಾಯ
ನೇಮಕಾತಿಗಾಗಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಯಲಿದ್ದು, ತಪ್ಪು ಉತ್ತರಕ್ಕೆ ಕಾಲು ಭಾಗ (0.25) ಅಂಕಗಳನ್ನು ಕಡಿತಗೊಳಿಸುವ ನೆಗೆಟಿವ್ ಮೌಲ್ಯಮಾಪನ ಇರಲಿದೆ. ಇದರೊಂದಿಗೆ ಅಭ್ಯರ್ಥಿಗಳು ನಿಗದಿತ ಮಾನದಂಡಗಳ ಪ್ರಕಾರ ದೈಹಿಕ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
ಅಕ್ಟೋಬರ್ 15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆಸಕ್ತರು ಅಕ್ಟೋಬರ್ 15ರೊಳಗೆ ಪ್ರಾಧಿಕಾರದ ವೆಬ್‌ಸೈಟ್ (cetonline.karnataka.gov.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹750, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ₹500 ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ. ನವೆಂಬರ್ 21ರಂದು ಲಿಖಿತ ಪರೀಕ್ಷೆ ನಡೆಯಲಿದೆ.




