ಕಾನ್ಸ್‌ಟೇಬಲ್ ನೇಮಕಾತಿ: KEAಯಿಂದ ಐದೇ ದಿನದಲ್ಲಿ ಫಲಿತಾಂಶ ಪ್ರಕಟ

ಬೆಂಗಳೂರು: ಕೆಎಸ್ ಆರ್ ಪಿ, ಕೆಎಸ್ಐಎಸ್ಎಫ್, ಐಆರ್ ಬಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಸೆ.20ರಂದು ನಡೆದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.

ಆಕ್ಷೇಪಣೆಗಳು ಇದಲ್ಲಿ ಸೆ.27ರೊಳಗೆ ನಿಗದಿತ ಲಿಂಕ್‌ ಮೂಲಕ ಸಲ್ಲಿಸಬಹುದು. ದಾಖಲೆ ಅವಧಿ ಅಂದರೆ ಪರೀಕ್ಷೆ ನಡೆದು ಕೇವಲ ಐದು ದಿನಗಳಲ್ಲಿಯೇ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಉಳಿಕೆ ಮೂಲ ವೃಂದದ 1,13,390 ಹಾಗೂ ಕಲ್ಯಾಣ ಕರ್ನಾಟಕ ವೃಂದದ 33,061 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ನಡೆದ ದಿನವೇ ಎಲ್ಲ ಅಭ್ಯರ್ಥಿಗಳ ಓಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಎಂಬಿಎ, ಎಂಸಿಎ ಫಲಿತಾಂಶ ಪ್ರಕಟ

ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂ ಆರ್ಕ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.

ಒಟ್ಟು 23,164 ಸೀಟು ಈ ಸುತ್ತಿನಲ್ಲಿ ಹಂಚಿಕೆಯಾಗಿವೆ. ಎಂಬಿಎ ಕೋರ್ಸ್ ಗೆ 11,462 ಹಾಗೂ ಎಂಸಿಎ ಕೋರ್ಸ್ ಗೆ 8,093 ಮತ್ತು ಎಂ.ಟೆಕ್ ಕೋರ್ಸ್ ಗೆ 3,609 ಸೀಟು ಹಂಚಿಕೆಯಾಗಿವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಎಂಸಿಎ ನಲ್ಲಿ 9,574, ಎಂಬಿಎ ನಲ್ಲಿ 2,195 ಹಾಗೂ ಎಂ.ಟೆಕ್ ನಲ್ಲಿ 1,821 ಸೀಟು ಹಂಚಿಕೆಯಾಗದೆ ಉಳಿದಿವೆ. ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಸೆ.29ರ ನಂತರ ಪ್ರಕಟಿಸಲಾಗುತ್ತದೆ ಎಂದು ಅವರು ವಿವರಿಸಿದರು.