ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ: ಡಿಸಿಎಂ ಡಾ.ಜಿ ಪರಮೇಶ್ವರ್ ಘೋಷಣೆ | Government Jobs

2 Percent reservation for sportspersons in state government jobs: DCM Dr G Parameshwara announces

ಬೆಂಗಳೂರು: ರಾಜ್ಯದ ಕ್ರೀಡಾಪಟುಗಳ (Athletes) ಭವಿಷ್ಯಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ(Government of Karnataka) ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಸಿವಿಲ್ ಸೇವೆಗಳ (Civil Service) ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ (Government Jobs) ಕ್ರೀಡಾ ಸಾಧಕರಿಗೆ (Sports Achiever) ಶೇ.2ರಷ್ಟು ಸಮತಲ ಮೀಸಲಾತಿ(Reservation) ಕಲ್ಪಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ ಎಂಬುದಾಗಿ ಡಿಸಿಎಂ ಡಾ.ಜಿ.ಪರಮೇಶ್ವರ್(DCM Dr G Parameshwara) ಘೋಷಿಸಿದ್ದಾರೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಜ್ಯದ ಕೀರ್ತಿ ಹೆಚ್ಚಿಸುತ್ತಿರುವ ಕ್ರೀಡಾಪಟುಗಳ ಕ್ರೀಡಾ ಬದುಕಿನ ನಂತರದ ದಿನಗಳಿಗೆ ನೆರವಾಗಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಎಲ್ಲಾ ಪ್ರವರ್ಗಗಳಿಗೂ ಲಭ್ಯವಾಗಲಿದೆ ಮೀಸಲಾತಿ ಸೌಲಭ್ಯ

ಹೊಸ ನಿಯಮದ ಪ್ರಕಾರ ಈ ಶೇಕಡಾ ಎರಡರಷ್ಟು ಮೀಸಲಾತಿಯು ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗಕ್ಕೂ ಸಮಾನವಾಗಿ ಅನ್ವಯವಾಗಲಿದೆ. ಇದರಿಂದಾಗಿ ಎಲ್ಲಾ ಸಾಮಾಜಿಕ ವರ್ಗಗಳ ಅರ್ಹ ಕ್ರೀಡಾಪಟುಗಳಿಗೂ ಸರ್ಕಾರಿ ನೌಕರಿಯಲ್ಲಿ ಪ್ರಾತಿನಿಧ್ಯ ದೊರೆಯಲಿದೆ.

ಅರ್ಹತೆಯ ಮಾನದಂಡ ಹಾಗೂ ಕೃಪಾಂಕದ ನಿಯಮಗಳು

ಈ ಮೀಸಲಾತಿ ಸೌಲಭ್ಯವನ್ನು ಪಡೆಯಲು ಕ್ರೀಡಾಪಟುಗಳು ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳ ಕಾಲ ನೆಲೆಸಿರಬೇಕು ಹಾಗೂ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿರಬೇಕು. ಇದರೊಂದಿಗೆ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಸೇರಿದಂತೆ ಸರ್ಕಾರ ಅಧಿಸೂಚಿಸಿರುವ 34 ಕ್ರೀಡೆಗಳಲ್ಲಿ ತೋರಿದ ಸಾಧನೆಗೆ ಅನುಗುಣವಾಗಿ ನೇಮಕಾತಿಯಲ್ಲಿ ಕೃಪಾಂಕದ (Grace Marks) ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಕ್ರೀಡಾ ಪಯಣದ ಪ್ರತಿ ಹಂತದಲ್ಲೂ ಸರ್ಕಾರದ ಬೆಂಬಲ

ಕ್ರೀಡಾಪಟುಗಳು ಪದಕ ಗೆಲ್ಲುವ ಕ್ಷಣದಲ್ಲಿ ಮಾತ್ರವಲ್ಲದೆ ಅವರ ಇಡೀ ಕ್ರೀಡಾ ಪಯಣದ ಪ್ರತಿಯೊಂದು ಹಂತದಲ್ಲೂ ಸರ್ಕಾರ ಅವರ ಜೊತೆಗೆ ನಿಲ್ಲಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಪ್ರತಿಭೆಗೆ ಸೂಕ್ತ ಅವಕಾಶ, ಸಾಧನೆಗೆ ತಕ್ಕ ಗೌರವ ಹಾಗೂ ಭವಿಷ್ಯಕ್ಕೆ ಭದ್ರತೆ ಕಲ್ಪಿಸುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ ಎಂಬ ಆಶಯದೊಂದಿಗೆ ಈ ಐತಿಹಾಸಿಕ ತೀರ್ಮಾನವನ್ನು ಜಾರಿಗೆ ತರಲಾಗಿದೆ.