ಈ ಹೃದ್ರೋಗದ ಆರಂಭಿಕ ಎಚ್ಚರಿಕೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ: ಹೃದ್ರೋಗ ತಜ್ಞರು | Heart Disease: Cardiologists

Never ignore the early warning signs of heart disease Cardiologists

ಹೃದ್ರೋಗಗಳು (Heart Disease) ಯಾವಾಗಲೂ ಮುಂಚಿತವಾಗಿ ತೀವ್ರ ಎಚ್ಚರಿಕೆಗಳನ್ನು ನೀಡಿ ಬರುವುದಿಲ್ಲ. ಹಲವು ಬಾರಿ ದೇಹವು ನೀಡುವ ಸಣ್ಣಪುಟ್ಟ ಮುನ್ಸೂಚನೆಗಳು ಸಾಮಾನ್ಯ ಸುಸ್ತು, ಆಸಿಡಿಟಿ ಅಥವಾ ಮಾನಸಿಕ ಒತ್ತಡವೆಂದು ತಪ್ಪಾಗಿ ಭಾವಿಸಲ್ಪಡುತ್ತವೆ. ಆದರೆ ಇಂತಹ ಸೂಕ್ಷ್ಮ ಲಕ್ಷಣಗಳನ್ನು ನಿರ್ಲಕ್ಷಿಸುವುದು ಜೀವಕ್ಕೆ ಅಪಾಯ ತರಬಹುದು ಎಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಖ್ಯಾತ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್(Cardiologists) ಡಾ. ಲಕ್ಷ್ಮೀಕಾಂತ್ ಪಿ. ಎಚ್ಚರಿಸಿದ್ದಾರೆ.

ಹೃದಯದ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಲು ನೆರವಾಗುವ 5 ಪ್ರಮುಖ ಲಕ್ಷಣಗಳ ವಿವರ ಇಲ್ಲಿದೆ:

1. ಎದೆಭಾಗದಲ್ಲಿ ಅಸಹಜ ಬಿಗಿತ ಅಥವಾ ಒತ್ತಡ (Chest Discomfort or Pressure):

ಎದೆಯ ಮಧ್ಯಭಾಗದಲ್ಲಿ ಅಥವಾ ಎಡಭಾಗದಲ್ಲಿ ತೀವ್ರ ಒತ್ತಡ, ಬಿಗಿತ, ಉರಿ ಅಥವಾ ಭಾರವಾದ ವಸ್ತುವೊಂದನ್ನು ಎದೆಯ ಮೇಲಿಟ್ಟಂತೆ ಭಾಸವಾಗುವುದು ಹೃದಯ ಸಮಸ್ಯೆಯ ಪ್ರಮುಖ ಲಕ್ಷಣ. ಶಾರೀರಿಕ ಪರಿಶ್ರಮ ಅಥವಾ ಮಾನಸಿಕ ಒತ್ತಡದ ವೇಳೆ ಈ ನೋವು ಕಾಣಿಸಿಕೊಂಡು ವಿಶ್ರಾಂತಿ ಪಡೆದಾಗ ಶಮನವಾಗಬಹುದು, ಇಲ್ಲವೇ ವಿಶ್ರಾಂತಿಯ ವೇಳೆಯೂ ಕಾಣಿಸಿಕೊಳ್ಳಬಹುದು. ಎದೆಯಲ್ಲಿ ನಿರಂತರ ಅಸಹಜತೆ ಕಂಡುಬಂದರೆ ತಕ್ಷಣ ವೈದ್ಯಕೀಯ ತಪಾಸಣೆ ಅಗತ್ಯ.

2. ಉಸಿರಾಟದ ತೊಂದರೆ (Breathlessness):

ದೇಹದ ಅಗತ್ಯಕ್ಕೆ ತಕ್ಕಂತೆ ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಸಾಧ್ಯವಾಗದಿದ್ದಾಗ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಸಾಮಾನ್ಯ ನಡಿಗೆ, ಮೆಟ್ಟಿಲು ಹತ್ತುವಾಗ ಅಥವಾ ಲಘು ವ್ಯಾಯಾಮ ಮಾಡುವಾಗ ಏದುಸಿರು ಬಿಡುವುದು, ಮಲಗಿದಾಗ ಅಥವಾ ಕುಳಿತಾಗಲೂ ಉಸಿರಾಟ ಕಷ್ಟವಾಗುವುದು ಹಾಗೂ ರಾತ್ರಿ ವೇಳೆ ಉಸಿರುಗಟ್ಟಿದಂತಾಗಿ ಎಚ್ಚರಗೊಳ್ಳುವುದು ಹೃದಯ ವೈಫಲ್ಯದ ಆರಂಭಿಕ ಮುನ್ಸೂಚನೆಗಳಾಗಿರಬಹುದು.

3. ಅತಿಯಾದ ಆಯಾಸ ಹಾಗೂ ಕೆಲಸ ಮಾಡುವ ಸಾಮರ್ಥ್ಯ ಕುಸಿತ (Fatigue):

ದೈನಂದಿನ ಚಟುವಟಿಕೆಗಳ ನಂತರ ಸುಸ್ತಾಗುವುದು ಸಾಮಾನ್ಯ. ಆದರೆ ಸಾಕಷ್ಟು ವಿಶ್ರಾಂತಿ ಪಡೆದರೂ ಕಡಿಮೆಯಾಗದ ನಿರಂತರ ಆಯಾಸ ಹೃದಯ ಸಮಸ್ಯೆಯ ಸಂಕೇತವಾಗಿರಬಹುದು. ಹಿಂದೆ ಸುಲಭವಾಗಿ ಮಾಡುತ್ತಿದ್ದ ಸಣ್ಣಪುಟ್ಟ ಕೆಲಸಗಳಿಗೂ ಬೇಗ ಸುಸ್ತಾಗುವುದು ಇದರ ಲಕ್ಷಣ. ವಿಶೇಷವಾಗಿ ಮಹಿಳೆಯರಲ್ಲಿ ಎದೆನೋವಿನ ಬದಲು ಅತಿಯಾದ ಸುಸ್ತು, ವಾಕರಿಕೆ ಮತ್ತು ತಲೆಸುತ್ತು ಮುಂತಾದ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.

4. ದೇಹದ ಇತರ ಭಾಗಗಳಿಗೆ ಹರಡುವ ನೋವು (Radiating Pain):

ಹೃದಯ ಸಂಬಂಧಿ ನೋವು ಯಾವಾಗಲೂ ಎದೆಗಷ್ಟೇ ಸೀಮಿತವಾಗಿರುವುದಿಲ್ಲ. ಇದು ಕುತ್ತಿಗೆ, ದವಡೆ, ಭುಜ, ಎಡ ಅಥವಾ ಎರಡೂ ಕೈಗಳು ಹಾಗೂ ಹೊಟ್ಟೆಯ ಮೇಲ್ಭಾಗಕ್ಕೆ ಹರಡಬಹುದು. ಹಲವರು ಇದನ್ನು ಕೇವಲ ಸ್ನಾಯು ಸೆಳೆತ ಅಥವಾ ಗ್ಯಾಸ್ಟ್ರಿಕ್ ನೋವೆಂದು ಕಡೆಗಣಿಸುತ್ತಾರೆ. ಮಧುಮೇಹಿಗಳು ಮತ್ತು ಹಿರಿಯರಲ್ಲಿ ಎದೆನೋವು ಇಲ್ಲದೆಯೂ ಇಂತಹ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು.

5. ತಲೆಸುತ್ತು, ಅತಿಯಾದ ಬೆವರು ಅಥವಾ ಅಸಹಜ ಹೃದಯ ಬಡಿತ (Palpitations & Dizziness):

ಏಕಾಏಕಿ ತಲೆಸುತ್ತು ಬರುವುದು, ತಣ್ಣಗೆ ಬೆವರುವಿಕೆ, ವಾಕರಿಕೆ ಅಥವಾ ಪ್ರಜ್ಞೆ ತಪ್ಪುವಂತಾಗುವುದು ಮತ್ತು ಹೃದಯವು ಅತಿ ವೇಗವಾಗಿ ಅಥವಾ ಲಯತಪ್ಪಿ ಬಡಿಯುವುದು (Arrhythmia) ಹೃದಯದ ರಕ್ತ ಪರಿಚಲನೆಯ ದೋಷವನ್ನು ಸೂಚಿಸುತ್ತದೆ. ಎದೆನೋವು ಅಥವಾ ಉಸಿರಾಟದ ತೊಂದರೆಯ ಜತೆಗೆ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ತುರ್ತು ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

ಯಾವುದೇ ಅಸಹಜ ದೈಹಿಕ ಬದಲಾವಣೆಗಳು ನಿರಂತರವಾಗಿ ಕಂಡುಬಂದರೆ ಅದನ್ನು ಕಡೆಗಣಿಸದೆ, ಸಕಾಲದಲ್ಲಿ ಕಾರ್ಡಿಯಾಲಜಿಸ್ಟ್ ಭೇಟಿ ಮಾಡಿ ಇಸಿಜಿ, ಎಕೋ ಮುಂತಾದ ಪ್ರಾಥಮಿಕ ತಪಾಸಣೆ ಮಾಡಿಸಿಕೊಳ್ಳುವುದು ಜೀವ ರಕ್ಷಣೆಗೆ ಅತ್ಯಂತ ಪರಿಣಾಮಕಾರಿ ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ.