ಬೆಂಗಳೂರು: ಏಷ್ಯನ್ ಗೇಮ್ಸ್ 2026ರ (Asian Games 2026) ಕ್ರೀಡಾಕೂಟದಲ್ಲಿ ದೇಶ ಹಾಗೂ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದ ರಾಜ್ಯದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (Chief Minister DK Shivakumar) ಸನ್ಮಾನಿಸಿ, ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ನಗದು ಬಹುಮಾನದ ಭಾರೀ ಹೆಚ್ಚಳ, ನೇರ ಸರ್ಕಾರಿ ಉದ್ಯೋಗ (Government Jobs) ಹಾಗೂ ಒಲಿಂಪಿಕ್ಸ್ ಸಿದ್ಧತೆಗೆ ವಿಶೇಷ ಅನುದಾನ ಸೇರಿದಂತೆ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಯಿತು.
ಭಾಗವಹಿಸಿದ ಪ್ರತಿಯೊಬ್ಬರಿಗೂ ತಲಾ ₹5 ಲಕ್ಷ ಪ್ರೋತ್ಸಾಹಧನ
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿನೂತನ ಹೆಜ್ಜೆಯಿಟ್ಟಿರುವ ಸರ್ಕಾರ, ಏಷ್ಯನ್ ಗೇಮ್ಸ್ನಲ್ಲಿ ಕೇವಲ ಪದಕ ಗೆದ್ದವರಿಗೆ ಮಾತ್ರವಲ್ಲದೆ, ಅರ್ಹತೆ ಪಡೆದು ಭಾಗವಹಿಸಿದ ರಾಜ್ಯದ ಎಲ್ಲಾ 20 ಕ್ರೀಡಾಪಟುಗಳಿಗೂ ತಲಾ 5 ಲಕ್ಷ ರೂಪಾಯಿ ನಗದು ಪ್ರೋತ್ಸಾಹಧನ ನೀಡಿ ಗೌರವಿಸಿದೆ. ಕ್ರಿಕೆಟರ್ ಶ್ರೇಯಾಂಕ ಪಾಟೀಲ್, ಗಾಲ್ಫ್ ಆಟಗಾರ್ತಿಯರಾದ ಅದಿತಿ ಅಶೋಕ್, ಪ್ರಣವಿ ಅರಸ್, ಅಥ್ಲೀಟ್ ಎಂ.ಆರ್. ಪೂವಮ್ಮ ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಈ ಮೊತ್ತ ಲಭಿಸಿದೆ.
ನಗದು ಬಹುಮಾನ ಮೊತ್ತ ದುಪ್ಪಟ್ಟು: ಚಿನ್ನಕ್ಕೆ ₹1 ಕೋಟಿ
ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಈ ಹಿಂದೆ ನೀಡಲಾಗುತ್ತಿದ್ದ ನಗದು ಬಹುಮಾನದ ಮೊತ್ತವನ್ನು ಸರ್ಕಾರ ಗಣನೀಯವಾಗಿ ಹೆಚ್ಚಿಸಿದೆ.
ಚಿನ್ನದ ಪದಕಕ್ಕೆ ಈ ಹಿಂದಿದ್ದ ₹35 ಲಕ್ಷವನ್ನು ₹1 ಕೋಟಿಗೆ ಏರಿಕೆ ಮಾಡಲಾಗಿದೆ.
ಬೆಳ್ಳಿ ಪದಕದ ಮೊತ್ತವನ್ನು ₹25 ಲಕ್ಷದಿಂದ ₹75 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಕಂಚಿನ ಪದಕ ವಿಜೇತರಿಗೆ ₹15 ಲಕ್ಷದ ಬದಲು ₹50 ಲಕ್ಷ ಬಹುಮಾನ ನಿಗದಿಪಡಿಸಲಾಗಿದೆ.
ಈ ಬಾರಿ ಪದಕ ಗೆದ್ದ 8 ಕ್ರೀಡಾಪಟುಗಳಿಗೆ ಈ ಪರಿಷ್ಕೃತ ಮೊತ್ತದ ಜೊತೆಗೆ ಭಾಗವಹಿಸುವಿಕೆಗೆ ನೀಡಲಾಗುವ ತಲಾ ₹5 ಲಕ್ಷವನ್ನೂ ಸೇರಿಸಿ ವಿತರಿಸಲಾಗಿದೆ. ಮಹಿಳಾ ಕ್ರಿಕೆಟ್ನಲ್ಲಿ ಚಿನ್ನ ಗೆದ್ದ ಶ್ರೇಯಾಂಕ ಪಾಟೀಲ್ ಹಾಗೂ ಪುರುಷರ ಹಾಕಿಯಲ್ಲಿ ಚಿನ್ನ ಗೆದ್ದ ಮೋಹಿತ್ ಹೆಚ್.ಎಸ್. ಅವರಿಗೆ ತಲಾ ₹1 ಕೋಟಿ ನಗದು ಪುರಸ್ಕಾರ ದೊರೆತಿದೆ. ಇನ್ನು ಅಥ್ಲೆಟಿಕ್ಸ್ನಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ಜಯಿಸಿದ ಎಂ.ಆರ್. ಪೂವಮ್ಮ ಹಾಗೂ ಗಾಲ್ಫ್ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಪ್ರಣವಿ ಎಸ್. ಅರಸ್ ಅವರಿಗೆ ಒಟ್ಟು ತಲಾ ₹1.75 ಕೋಟಿ ನಗದು ಬಹುಮಾನ ಲಭಿಸಿದೆ. ಉಳಿದಂತೆ ತಿಲೋತ್ತಮ ಸೇನ್ ಹಾಗೂ ಅದಿತಿ ಅಶೋಕ್ ತಲಾ ₹75 ಲಕ್ಷ ಮತ್ತು ಆಯುಷ್ ಶೆಟ್ಟಿ ಹಾಗೂ ಸ್ನೇಹ ಎಸ್.ಎಸ್. ತಲಾ ₹50 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದಾರೆ.
ನೇರ ಸರ್ಕಾರಿ ಉದ್ಯೋಗ ಮತ್ತು ಶೇ.2ರಷ್ಟು ಮೀಸಲಾತಿ
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪದಕ ಗೆದ್ದು ಸಾಧನೆ ಮಾಡಿದ ಅರ್ಹ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ‘ಗ್ರೂಪ್-ಬಿ’ ವೃಂದದ ಉನ್ನತ ಹುದ್ದೆಗಳಲ್ಲಿ ನೇರ ನೇಮಕಾತಿ ನೀಡಲು ನಿಯಮಾವಳಿ ರೂಪಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಉನ್ನತ ಸಮಿತಿ ಈ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಿದೆ. ಇದರೊಂದಿಗೆ ರಾಜ್ಯ ಸಿವಿಲ್ ಸೇವೆಗಳ ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದದ ಎಲ್ಲಾ ನೇರ ನೇಮಕಾತಿಗಳಲ್ಲೂ ಕ್ರೀಡಾ ಸಾಧಕರಿಗೆ ಶೇ.2ರಷ್ಟು ಸಮತಲ ಮೀಸಲಾತಿಯನ್ನು ಕಲ್ಪಿಸಿ ಈಗಾಗಲೇ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
‘ಟಾರ್ಗೆಟ್ ಒಲಿಂಪಿಕ್ಸ್’ಗೆ ತಲಾ ₹10 ಲಕ್ಷ ಸಿದ್ಧತಾ ಅನುದಾನ
ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳು ಪದಕ ಬೇಟೆಯಾಡಲು ನೆರವಾಗುವಂತೆ ‘ಟಾರ್ಗೆಟ್ ಒಲಿಂಪಿಕ್ಸ್’ ಯೋಜನೆಯನ್ನು ಚುರುಕುಗೊಳಿಸಲಾಗಿದೆ. 2026-27ನೇ ಸಾಲಿಗೆ ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹ ಎಸ್.ಎಸ್., ಶ್ರೇಯಾಂಕ ಪಾಟೀಲ್ ಹಾಗೂ ಕಾಮನ್ವೆಲ್ತ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಒಲಿಂಪಿಕ್ಸ್ ಪೂರ್ವ ತರಬೇತಿ ಮತ್ತು ಅಭ್ಯಾಸಕ್ಕಾಗಿ ಪ್ರಸಕ್ತ ಸಾಲಿನಲ್ಲಿ ತಲಾ ₹10 ಲಕ್ಷ ವಿಶೇಷ ಅನುದಾನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ.



