ಪಿಜಿಸಿಇಟಿ ಕೌನ್ಸೆಲಿಂಗ್: ಎಲ್ಲ ನಾಲ್ಕು ಚಾಯ್ಸ್‌ ದಾಖಲಿಸಲು KEA ಗ್ರೀನ್ ಸಿಗ್ನಲ್ | KEA

PGCET Counselling KEA gives the green signal to enter all four choices

ಬೆಂಗಳೂರು: ರಾಜ್ಯದಲ್ಲಿ ಎಂಬಿಎ (MBA), ಎಂಸಿಎ (MCA), ಎಂಇ (ME), ಎಂ.ಟೆಕ್ (M.Tech) ಹಾಗೂ ಎಂ.ಆರ್ಕ್ (M.Arch) ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ (First Round Seat Allotment) ಅಭ್ಯರ್ಥಿಗಳಿಗೆ ಎಲ್ಲಾ ನಾಲ್ಕು ಚಾಯ್ಸ್‌ಗಳನ್ನು (All Four Choices) ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಅವಕಾಶ ಕಲ್ಪಿಸಿದೆ.

ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 13ರಂದು ಬೆಳಿಗ್ಗೆ 10 ಗಂಟೆಯವರೆಗೆ ತಮ್ಮ ಚಾಯ್ಸ್‌ಗಳನ್ನು ದಾಖಲಿಸಲು ಗಡುವು ನೀಡಲಾಗಿದೆ. ಈಗಾಗಲೇ ಮೊದಲ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳ ಆಧಾರದ ಮೇಲೆ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ (Already Admitted) ವಿದ್ಯಾರ್ಥಿಗಳು ಸಹ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಚಾಯ್ಸ್ ನಮೂದಿಸಬಹುದಾಗಿದೆ.

ಆಪ್ಷನ್ಸ್ ಮರುಹೊಂದಿಕೆಗೆ (Option Rearrange) ಅವಕಾಶ

ಚಾಯ್ಸ್ ದಾಖಲಾತಿ ಪ್ರಕ್ರಿಯೆ ಮುಗಿದ ಬಳಿಕ, ಅಭ್ಯರ್ಥಿಗಳಿಗೆ ತಮ್ಮ ಆಯ್ಕೆಗಳನ್ನು ಆದ್ಯತೆಯ ಮೇರೆಗೆ ಮೇಲೆ-ಕೆಳಗೆ ಮರುಹೊಂದಿಸಿಕೊಳ್ಳಲು (Rearrange Options) ಅವಕಾಶ ನೀಡಲಾಗಿದೆ. ಅಕ್ಟೋಬರ್ 13ರಂದು ಮಧ್ಯಾಹ್ನ 2 ಗಂಟೆಯಿಂದ ಅಕ್ಟೋಬರ್ 15ರ ಬೆಳಿಗ್ಗೆ 10 ಗಂಟೆಯವರೆಗೆ ಆಪ್ಷನ್ಸ್ ಬದಲಾವಣೆ ಅಥವಾ ಮರುಹೊಂದಿಕೆಗೆ ಕೆಇಎ ಪೋರ್ಟಲ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ: ಮುಂದಿನ ತೀರ್ಮಾನದವರೆಗೆ ವಿನಾಯಿತಿ

ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಇನ್ನೂ ಎರಡು ಸುತ್ತಿನ ಕೌನ್ಸೆಲಿಂಗ್ (Two More Rounds of Counselling) ನಡೆಸಲು ಅನುಮತಿ ನೀಡಬೇಕು ಹಾಗೂ ಯುಜಿ (UG) ಮತ್ತು ಪಿಜಿ (PG) ಕೋರ್ಸ್‌ಗಳ ಪ್ರವೇಶಕ್ಕೆ ಪ್ರತ್ಯೇಕ ವೇಳಾಪಟ್ಟಿ ನಿಗದಿಪಡಿಸುವಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ (AICTE) ನಿರ್ದೇಶನ ನೀಡಬೇಕೆಂದು ಕೋರಿ ಈಗಾಗಲೇ ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ಕುರಿತು ನ್ಯಾಯಾಲಯದ ಮುಂದಿನ ತೀರ್ಮಾನ ಹೊರಬರುವವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ನಾಲ್ಕು ಚಾಯ್ಸ್‌ಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ (Executive Director) ಹೆಚ್. ಪ್ರಸನ್ನ ಐಎಎಸ್ (H. Prasanna IAS) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.