ಬೆಂಗಳೂರು ಹೊರತಾಗಿ ಉತ್ತರ ಕರ್ನಾಟಕಕ್ಕೂ ಕೈಗಾರಿಕೆ, ಹೂಡಿಕೆ ವಿಸ್ತರಣೆ ನಮ್ಮ ಸಂಕಲ್ಪ: ಎಂ.ಬಿ. ಪಾಟೀಲ್

ಬೆಂಗಳೂರು: ಬೆಂಗಳೂರು ಮಾತ್ರವಲ್ಲದೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಿಗೂ ಹೂಡಿಕೆ, ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಹೂಡಿಕೆ ಸ್ನೇಹಿ ನೀತಿಗಳು, ಉದ್ಯಮಸ್ನೇಹಿ ವಾತಾವರಣ, ಸುಲಲಿತ ವ್ಯವಹಾರ ವ್ಯವಸ್ಥೆ ಹಾಗೂ ದೂರದೃಷ್ಟಿಯ ಯೋಜನೆಗಳ ಮೂಲಕ ಕರ್ನಾಟಕವನ್ನು ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣವನ್ನಾಗಿಸಲು ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶ (GIM) 2025ರ ಯಶಸ್ಸು, ಹೂಡಿಕೆ ಪ್ರಸ್ತಾವನೆಗಳ ಅನುಷ್ಠಾನಕ್ಕೆ ದೊರೆತ ವೇಗ ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸುತ್ತಿರುವ ಕೈಗಾರಿಕಾ ಬೆಳವಣಿಗೆ ಈ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದೇ ಉತ್ಸಾಹದೊಂದಿಗೆ GIM 2027ಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಜಾಗತಿಕ ಬಂಡವಾಳವನ್ನು ಕರ್ನಾಟಕದತ್ತ ಆಕರ್ಷಿಸುವುದರ ಜತೆಗೆ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.