ಬಳ್ಳಾರಿ: ಕಲಿಯುಗ ಕಲ್ಪತರು, ಕಾಮಧೇನು ಎಂದೇ ಭಕ್ತರಿಂದ ಆರಾಧಿಸಲ್ಪಡುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆಯನ್ನು ಸರಳವಾಗಿ ಪರಿಚಯಿಸುವ ಸಚಿತ್ರ ಪುಸ್ತಕಗಳನ್ನು ಏಳು ಭಾಷೆಗಳಲ್ಲಿ ಪ್ರಕಟಿಸಲಾಗಿದೆ.
ಮೀಡಿಯಾಟೆಕ್ ಸಂಸ್ಥೆಯು ಕನ್ನಡ, ಹಿಂದಿ, ಸಂಸ್ಕೃತ, ತೆಲುಗು, ತಮಿಳು, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಈ ಪುಸ್ತಕಗಳನ್ನು ಹೊರತಂದಿದೆ.
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲೆಯ ಕುಂಚನಗುಡ್ಡದಲ್ಲಿರುವ ಶ್ರೀ ವಸುಧೇಂದ್ರತೀರ್ಥರ ಮೂಲ ಬೃಂದಾವನದ ಸನ್ನಿಧಿಯಲ್ಲಿ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಶ್ರೀ ವಸುಧೇಂದ್ರತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಅಮೃತಹಸ್ತದಿಂದ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

ಜಾತಿ, ಮತ, ಕುಲಗಳ ಭೇದವಿಲ್ಲದೆ ದೇಶ-ವಿದೇಶಗಳಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಮತ್ತು ಸಂದೇಶಗಳು ಇಂದಿನ ಪೀಳಿಗೆಗೂ ಮಾರ್ಗದರ್ಶಿಯಾಗಿವೆ. ಸನ್ಯಾಸ ಸ್ವೀಕರಿಸುವ ಮುನ್ನ ತೀವ್ರ ಬಡತನ ಅನುಭವಿಸಿದ್ದ ಅವರು, ತಮ್ಮ ಆಧ್ಯಾತ್ಮಿಕ ಸಾಧನೆ ಮತ್ತು ಅನುಗ್ರಹದ ಮೂಲಕ ಅಸಂಖ್ಯಾತ ಭಕ್ತರ ಆರಾಧ್ಯ ದೈವವಾಗಿ ಗುರುತಿಸಿಕೊಂಡಿದ್ದಾರೆ ಎಂಬ ನಂಬಿಕೆ ಭಕ್ತರಲ್ಲಿದೆ.
ಸ್ವಾಮಿಗಳ ಜೀವನ ಚರಿತ್ರೆ, ಆಧ್ಯಾತ್ಮಿಕ ಸಾಧನೆ ಮತ್ತು ಸಂದೇಶಗಳನ್ನು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಸರಳ ಭಾಷೆ, ಆಕರ್ಷಕ ಚಿತ್ರಗಳು ಹಾಗೂ ಸುಲಭ ನಿರೂಪಣೆಯೊಂದಿಗೆ ಪುಸ್ತಕಗಳನ್ನು ರೂಪಿಸಲಾಗಿದೆ ಎಂದು ಪ್ರಕಟಕರು ತಿಳಿಸಿದ್ದಾರೆ.


