ತಿರುವನಂತಪುರಂ: ಸಿಎಜಿ ಲೆಕ್ಕಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣೆಗಳ ಮೇಲೆ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷರ ಸಮ್ಮೇಳನ ಒತ್ತಾಯಿಸಿದೆ.
ಸಮ್ಮೇಳನದ ಕೊನೆಯಲ್ಲಿ ಅಂಗೀಕರಿಸಲಾದ ನಿರ್ಣಯವು, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಸಲ್ಲಿಕೆಯೊಂದಿಗೆ ಸರ್ಕಾರದ ಹೊಣೆಗಾರಿಕೆ ಮುಗಿಯಬಾರದು. ವರದಿಯಲ್ಲಿ ಗುರುತಿಸಲಾದ ಲೋಪಗಳನ್ನು ಸರಿಪಡಿಸುವವರೆಗೆ ಕ್ರಮ ಮುಂದುವರಿಯಬೇಕು ಎಂದು ಪ್ರತಿಪಾದಿಸಿದೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಸಾರ್ವಜನಿಕ ಹಣವನ್ನು ಅನುಮೋದಿತ ಉದ್ದೇಶಗಳಿಗೆ ಮಾತ್ರ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಿಎಸಿಗಳು ಉತ್ತಮ ಕಾರ್ಯವಿಧಾನಗಳನ್ನು ಹಂಚಿಕೊಳ್ಳಲು ಸಾಮಾನ್ಯ ಡಿಜಿಟಲ್ ವೇದಿಕೆ ಸ್ಥಾಪಿಸುವಂತೆಯೂ ನಿರ್ಣಯ ಶಿಫಾರಸು ಮಾಡಿದೆ.

ಆಡಿಟ್ ಆಕ್ಷೇಪಣೆಗಳ ಪ್ರಗತಿ ಪರಿಶೀಲಿಸಲು ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸುವುದು ಹಾಗೂ ಸಿಎಜಿ ವರದಿಗಳಲ್ಲಿನ ಅಂಶಗಳು ಮತ್ತು ಪಿಎಸಿ ಶಿಫಾರಸುಗಳ ಕುರಿತು ಸರ್ಕಾರಗಳು ನಿಗದಿತ ಅವಧಿಯಲ್ಲಿ ಕ್ರಮ ಕೈಗೊಂಡ ವರದಿ ಸಲ್ಲಿಸುವುದಕ್ಕೂ ಒತ್ತು ನೀಡಲಾಗಿದೆ.
ಪಿಎಸಿ ಸದಸ್ಯರು ಮತ್ತು ಸಚಿವಾಲಯದ ಸಿಬ್ಬಂದಿಗೆ ವಿಶೇಷ ತರಬೇತಿ, ನಿಯಮಿತ ಸಭೆಗಳು, ಬಾಕಿ ಇರುವ ಆಕ್ಷೇಪಣೆಗಳ ಇತ್ಯರ್ಥಕ್ಕೆ ಉಪಸಮಿತಿಗಳ ರಚನೆ ಹಾಗೂ ಸಿಎಜಿ ಜತೆ ಸಮನ್ವಯ ಹೆಚ್ಚಿಸುವ ಪ್ರಸ್ತಾಪಗಳನ್ನೂ ಮಾಡಲಾಗಿದೆ.
ಹಣಕಾಸಿನ ಲೋಪಗಳನ್ನು ಗುರುತಿಸಲು ವಿಧಿವಿಜ್ಞಾನ ಉಪಕರಣಗಳು ಮತ್ತು ಆಧುನಿಕ ತಂತ್ರಜ್ಞಾನ ಬಳಸಬೇಕು ಎಂದು ಸಮ್ಮೇಳನ ಸಲಹೆ ನೀಡಿದೆ.
ಸಾರ್ವಜನಿಕ ಹಣದ ಸಮರ್ಪಕ ಲೆಕ್ಕಪತ್ರ ನಿರ್ವಹಣೆ ಮತ್ತು ಲೋಪಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿಸುವುದು ಈ ನಿರ್ಣಯದ ಉದ್ದೇಶವಾಗಿದೆ ಎಂದು ವೇಣುಗೋಪಾಲ್ ಹೇಳಿದರು.



