ಫ್ರಾನ್ಸ್‌ ಆಡಳಿತಕ್ಕೆ ನಡುಕ ಹುಟ್ಟಿಸಿದ ಕಾರ್ಮಿಕ ಸಂಘಟನೆಗಳ ಮುಷ್ಕರ; ಹೋರಾಟದಲ್ಲಿ 2.70 ಲಕ್ಷ ಮಂದಿ ಭಾಗಿ

ಪ್ಯಾರಿಸ್: ವೇತನ ಹೆಚ್ಚಳ, ಉತ್ತಮ ಪಿಂಚಣಿ ಹಾಗೂ ಜೀವನ ವೆಚ್ಚ ಇಳಿಸುವಂತೆ ಆಗ್ರಹಿಸಿ ಫ್ರಾನ್ಸ್‌ನಲ್ಲಿ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಿವೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ಯಾರಿಸ್, ಲಿಯಾನ್, ಮಾರ್ಸೆಲೆ ಸೇರಿದಂತೆ ಹಲವು ನಗರಗಳಲ್ಲಿ ಲಕ್ಷಾಂತರ ಮಂದಿ ಬೀದಿಗಿಳಿದಿದ್ದಾರೆ.

ಪ್ಯಾರಿಸ್ ಹೊರವಲಯದ 180 ಪ್ರತಿಭಟನೆಗಳಲ್ಲಿ ಸುಮಾರು 2.70 ಲಕ್ಷ ಮಂದಿ ಭಾಗವಹಿಸಿದ್ದಾರೆ. ಬಹುತೇಕ ಪ್ರತಿಭಟನೆಗಳು ಶಾಂತಿಯುತವಾಗಿದ್ದರೂ ಕೆಲವೆಡೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಮೂರನೇ ಒಂದು ಭಾಗದಷ್ಟು ಪ್ರೌಢಶಾಲೆಗಳು ಬಂದ್ ಆಗಿದ್ದು, ಸಾರ್ವಜನಿಕ ಸಾರಿಗೆಗೂ ಅಡಚಣೆಯಾಗಿದೆ. ಪ್ಯಾರಿಸ್‌ನ ಐಫೆಲ್ ಟವರ್ ಪ್ರವಾಸಿಗರಿಗೆ ಮುಚ್ಚಲಾಗಿದೆ. ಟೌಲೌಸ್ ಸಮೀಪದ ಶಾಲೆಯೊಂದಕ್ಕೆ ಬೆಂಕಿ ಹಚ್ಚಿರುವ ವರದಿಯಾಗಿದೆ.

ಪ್ರತಿಭಟನೆ ನಿಯಂತ್ರಿಸಲು ಸರ್ಕಾರ 70 ಸಾವಿರ ಪೊಲೀಸರನ್ನು ನಿಯೋಜಿಸಿದೆ. ಫ್ರಾನ್ಸ್‌ಗೆ ಪ್ರಯಾಣಿಸುವ ಅಮೆರಿಕನ್ನರಿಗೆ ಅಲ್ಲಿನ ರಾಯಭಾರ ಕಚೇರಿ ಭದ್ರತಾ ಎಚ್ಚರಿಕೆ ನೀಡಿದೆ.