ಬೆಂಗಳೂರು ಮಾಸ್ ಮರ್ಡರ್ ಕೇಸ್: ಶವ ಸಾಗಿಸಲು 9 ಸುತ್ತಿನ ಪ್ಲಾಸ್ಟಿಕ್ ಕವಚ ಹೆಣೆದಿದ್ದ ಪಾಪಿ! Bengaluru Mass Murder Case

Bengaluru Mass Murder Case The culprit wrapped the bodies in 9 layers of plastic

ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಒಂದೇ ಕುಟುಂಬದ ಏಳು ಜನರ ಭೀಕರ ಹತ್ಯೆ ಪ್ರಕರಣದಲ್ಲಿ(Bengaluru Mass Murder Case) ಪೊಲೀಸರ ತನಿಖೆ ಮುಂದುವರಿದಂತೆ ಹಂತಕನ ಅತ್ಯಂತ ವಿಕೃತ ಹಾಗೂ ಕಪಟ ಮುಖಗಳು ಬಯಲಾಗುತ್ತಿವೆ. ಕೊಲೆ ಮಾಡಿದ ಬಳಿಕ ಶವಗಳನ್ನು ಬೇರೆಡೆಗೆ ಸಾಗಿಸಿ ಎಸೆಯಲು ಆರೋಪಿ ಇಂದುಶೇಖರ್ ಹೆಣೆದಿದ್ದ ಚಾಲಾಕಿ ತಂತ್ರವನ್ನು ಕಂಡು ಖುದ್ದು ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ಆ ಮೂಲಕ ಬೆಂಗಳೂರು ಮಾಸ್ ಮರ್ಟರ್ ಕೇಸ್(Bengaluru Mass Murder Case) ರೋಚಕ ಕತೆ ರಿವೀಲ್ ಆಗಿದೆ.

ರಕ್ತ ಸೋರದಂತೆ 9 ಪದರಗಳ ಪ್ಲಾಸ್ಟಿಕ್ ಕವಚ

ಹತ್ಯೆಗೀಡಾದವರ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸುವಾಗ ರಕ್ತ ಹೊರಗೆ ಸೋರಿ ಯಾರಿಗಾದರೂ ಅನುಮಾನ ಬರಬಹುದು ಎಂಬ ಕಾರಣಕ್ಕೆ ಆರೋಪಿ ಅತಿ ಜಾಣ್ಮೆಯ ಸಂಚು ರೂಪಿಸಿದ್ದ. ನಂದಿಬೆಟ್ಟದ ವ್ಯಾಪ್ತಿಯಲ್ಲಿ ಪತ್ತೆಯಾದ ಬಾಲಕ ಪುನೀತ್ ಮೃತದೇಹವನ್ನು ಪರಿಶೀಲಿಸಿದಾಗ ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಹಂತಕ ಮೊದಲು ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಬಿಗಿಯಾಗಿ ಸುತ್ತಿದ್ದ. ಬಳಿಕ ರಕ್ತದ ಹನಿ ಕೂಡ ಹೊರಬರದಂತೆ ಒಂದರ ಮೇಲೊಂದರಂತೆ ಬರೋಬ್ಬರಿ ಒಂಬತ್ತು ಪ್ಲಾಸ್ಟಿಕ್ ಚೀಲಗಳಲ್ಲಿ ಶವವನ್ನು ಹಾಕಿ, 9 ಸುತ್ತಿನ ಭದ್ರ ಕೋಟೆಯಂತೆ ಪ್ಯಾಕ್ ಮಾಡಿದ್ದ ಎಂಬುದು ವಿಚಾರಣೆ ವೇಳೆ ಬಯಲಾಗಿದೆ.

ಬಟ್ಟೆಯ ಮೂಟೆ ಎಂದು ನಂಬಿಸಲು ಮೊದಲೇ ಪ್ಲಾಸ್ಟಿಕ್ ಚೀಲ ಖರೀದಿ

ಕೊಲೆಗಳನ್ನು ಮಾಡುವ ಮುನ್ನವೇ ಆರೋಪಿ ಮಾರುಕಟ್ಟೆಯಿಂದ ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಿ ಸಿದ್ಧವಾಗಿಟ್ಟುಕೊಂಡಿದ್ದ. ಶವಗಳನ್ನು ಕಾರಿನಲ್ಲಿಟ್ಟುಕೊಂಡು ದೂರದ ಪ್ರದೇಶಗಳಿಗೆ ಸಾಗಿಸುವ ಮಾರ್ಗಮಧ್ಯೆ ಯಾರಾದರೂ ತಡೆದು ಪ್ರಶ್ನಿಸಿದರೆ, ಅಥವಾ ಅನುಮಾನ ವ್ಯಕ್ತಪಡಿಸಿದರೆ ಇದು ಹಳೆಯ ಬಟ್ಟೆಗಳ ಮೂಟೆ ಎಂದು ಸುಳ್ಳು ಹೇಳಿ ನಂಬಿಸಲು ಯೋಜನೆ ರೂಪಿಸಿಕೊಂಡಿದ್ದ. ಅತ್ಯಂತ ವ್ಯವಸ್ಥಿತವಾಗಿ ಶವಗಳನ್ನು ವಿಲೇವಾರಿ ಮಾಡಲು ಹಂತಕ ರೂಪಿಸಿದ್ದ ಈ ತಂತ್ರವನ್ನು ಪೊಲೀಸರು ಭೇದಿಸಿದ್ದಾರೆ.