ಎಥೆನಾಲ್ ಉದ್ಯಮದ ಸಮಸ್ಯೆಗೆ ಕೇಂದ್ರದ ನೀತಿಗಳೇ ಕಾರಣ: ಎಂ.ಬಿ. ಪಾಟೀಲ್

ಬೆಂಗಳೂರು: ಎಥೆನಾಲ್ ಉತ್ಪಾದನೆಗೆ ಉತ್ತೇಜನ ನೀಡಿದ ಕೇಂದ್ರ ಸರ್ಕಾರ, ಈಗ ಉತ್ಪಾದನೆಯಾದ ಶೇ. 20ರಿಂದ 30ರಷ್ಟನ್ನೂ ಖರೀದಿಸದಿರುವುದು ವಿಪರ್ಯಾಸ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಟೀಕಿಸಿದ್ದಾರೆ.

ಉದ್ಯಮಗಳಿಗೆ ಎಥೆನಾಲ್ ಉತ್ಪಾದಿಸುವಂತೆ ಸೂಚಿಸಿದ ಬಳಿಕ ಅದನ್ನು ಖರೀದಿಸುವ ಜವಾಬ್ದಾರಿಯೂ ಕೇಂದ್ರದ್ದಾಗಿದೆ. ಆದರೆ ಇ-10, ಇ-20, ಇ-30 ಎಂದು ನೀತಿಗಳನ್ನು ಬದಲಾಯಿಸಿ, ಈಗ ಖರೀದಿಗೆ ಹಿಂದೇಟು ಹಾಕುತ್ತಿರುವುದರಿಂದ ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ ಎಂದರು.

ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಿರುವ ಕುರಿತು ತನಿಖೆ ನಡೆಸಬೇಕೆಂಬ ರಾಹುಲ್ ಗಾಂಧಿ ಅವರ ಆಗ್ರಹ ನ್ಯಾಯಯುತವಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರವೂ ಅಗತ್ಯ ಕ್ರಮ ಕೈಗೊಳ್ಳಲಿದೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಹಾಸನ ಜಿಲ್ಲಾಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿರುವ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳು ಆಧಾರರಹಿತ. ಮಾಜಿ ಮುಖ್ಯಮಂತ್ರಿಯಾಗಿದ್ದವರು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಪಾಟೀಲ್ ತಿರುಗೇಟು ನೀಡಿದರು.

ಮಂಡ್ಯದಲ್ಲಿ ವಾಹನ ಪರೀಕ್ಷಾ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲು 100 ಎಕರೆ ಜಮೀನು ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈಗ 500 ಎಕರೆ ಕೇಳಿದರೂ ನೀಡಲು ಸಿದ್ಧವಿದೆ. ಈ ಬಗ್ಗೆ ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಕರ್ನಾಟಕಕ್ಕೆ ನಾಲ್ಕು ಸೆಮಿಕಂಡಕ್ಟರ್ ಕಂಪನಿಗಳನ್ನು ತರಲು ಕುಮಾರಸ್ವಾಮಿ ಪ್ರಯತ್ನಿಸಬೇಕು. ರಾಜ್ಯಕ್ಕೆ ಬರಲು ಆಸಕ್ತಿ ತೋರುವ ಕಂಪನಿಗಳನ್ನು ಪಿಎಲ್‌ಐ ಪ್ರೋತ್ಸಾಹಧನದ ಮೂಲಕ ಬೇರೆ ರಾಜ್ಯಗಳಿಗೆ ಕರೆದೊಯ್ಯುತ್ತಿರುವ ಕೇಂದ್ರದ ಕ್ರಮದ ಬಗ್ಗೆಯೂ ಧ್ವನಿ ಎತ್ತಬೇಕು ಎಂದು ಹೇಳಿದರು. ಹೋಂಡಾ ಕಂಪನಿ ಕರ್ನಾಟಕದಿಂದ ಹೊರಹೋಗುತ್ತಿದೆ ಎಂಬ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದರು.

ಮಹಾರಾಷ್ಟ್ರದ ಉಜ್ಜಿನಿ ಬಳಿ 40 ಟಿಎಂಸಿ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆಯಿಂದ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆಯಿದೆ. ಇದು ಕೃಷ್ಣಾ ಜಲವಿವಾದ ನ್ಯಾಯಾಧಿಕರಣದ ತೀರ್ಪಿಗೆ ವಿರುದ್ಧವಾಗಿದೆ. ಈ ಕುರಿತು ಕೇಂದ್ರ ಜಲಸಂಪನ್ಮೂಲ ಸಚಿವರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಪಾಟೀಲ್ ತಿಳಿಸಿದರು. ಇಂತಹ ಯೋಜನೆಗೆ ವಿಶ್ವಬ್ಯಾಂಕ್ ಹೇಗೆ ನೆರವು ನೀಡುತ್ತದೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.