KSRTC ಬಸ್ ಲಗೇಜ್ ದರ ದುಪ್ಪಟ್ಟು ಹೆಚ್ಚಳ! KSRTC Bus

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ (KSRTC Bus) ಸಂಚರಿಸುವ ಸಾರ್ವಜನಿಕರಿಗೆ ನಿಗಮವು ಮತ್ತೊಂದು ಆರ್ಥಿಕ ಹೊರೆ ನೀಡಿದೆ. ಇತ್ತೀಚೆಗಷ್ಟೇ ಟಿಕೆಟ್ ದರ ಪರಿಷ್ಕರಣೆ ಮಾಡಿದ್ದ ಸಾರಿಗೆ ಇಲಾಖೆ, ಇದೀಗ ಪ್ರಯಾಣಿಕರು ತಮ್ಮೊಂದಿಗೆ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ (KSRTC Bus) ಕೊಂಡೊಯ್ಯುವ ಲಗೇಜ್ (ಸಾಮಗ್ರಿ) ಸಾಗಣೆ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಪರಿಷ್ಕೃತ ದರಗಳು ಈಗಾಗಲೇ ಜಾರಿಗೆ ಬಂದಿವೆ.

ನಿಗಮದ ಹೊಸ ನಿಯಮಾವಳಿಗಳ ಪ್ರಕಾರ, ಪ್ರತಿಯೊಬ್ಬ ಪ್ರಯಾಣಿಕನಿಗೆ ನಿಗದಿತ ಮಿತಿಯವರೆಗೆ ಮಾತ್ರ ಸಾಮಗ್ರಿಗಳನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ. 10 ಕೆಜಿಯಿಂದ 20 ಕೆಜಿ ತೂಕದವರೆಗಿನ ಲಗೇಜ್‌ಗೆ ಯಾವುದೇ ಶುಲ್ಕ ವಿಧಿಸದೆ ಉಚಿತ ಸಾಗಣೆಗೆ ಮುಂದುವರಿಯಲಿದೆ. ಆದರೆ, ಈ ನಿರ್ದಿಷ್ಟ ತೂಕದ ಮಿತಿಯನ್ನು ಮೀರಿದ ಯಾವುದೇ ಹೆಚ್ಚುವರಿ ಲಗೇಜ್‌ಗೆ ಪ್ರಯಾಣಿಕರು ಜೇಬಿನಿಂದ ದುಪ್ಪಟ್ಟು ಹಣ ತೆರಬೇಕಾಗುತ್ತದೆ.

ಪರಿಷ್ಕೃತ ಲಗೇಜ್ ದರಗಳ ವಿವರ (ಸ್ಟೇಜ್ ಆಧಾರದಲ್ಲಿ):

  • ಮೊದಲ 5 ಸ್ಟೇಜ್‌ವರೆಗೆ: ಈ ಹಿಂದೆ ಇದ್ದ ₹6 ಶುಲ್ಕವನ್ನು ಇದೀಗ ₹10ಕ್ಕೆ ಏರಿಕೆ ಮಾಡಲಾಗಿದೆ.

  • 6 ರಿಂದ 10 ಸ್ಟೇಜ್‌ಗಳಿಗೆ: ಹಿಂದಿನ ₹10 ದರವನ್ನು ₹15ಕ್ಕೆ ಪರಿಷ್ಕರಿಸಲಾಗಿದೆ.

  • 11 ರಿಂದ 15 ಸ್ಟೇಜ್‌ಗಳಿಗೆ: ಈ ಮುಂಚೆ ಇದ್ದ ₹20 ಶುಲ್ಕವನ್ನು ₹25ಕ್ಕೆ ಹೆಚ್ಚಿಸಲಾಗಿದೆ.

ದೂರದ ಊರುಗಳಿಗೆ ವ್ಯಾಪಾರ, ಶಿಕ್ಷಣ ಹಾಗೂ ಕೃಷಿ ಕೆಲಸಗಳಿಗಾಗಿ ಸಾಮಗ್ರಿಗಳನ್ನು ಹೊತ್ತು ಸಾಗುವ ಸಾಮಾನ್ಯ ಜನರಿಗೆ ಈ ಲಗೇಜ್ ಶುಲ್ಕ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ, ಕೆಎಸ್‌ಆರ್‌ಟಿಸಿ ಬಸ್ ಹತ್ತುವ ಮುನ್ನ ತಮ್ಮ ಬ್ಯಾಗ್ ಮತ್ತು ಲಗೇಜ್ ತೂಕದ ಬಗ್ಗೆ ಪ್ರಯಾಣಿಕರು ಎಚ್ಚರ ವಹಿಸುವುದು ಅನಿವಾರ್ಯವಾಗಿದೆ.