ಕೇರಳದ ರಸ್ತೆ ಸುರಕ್ಷತಾ ಅಭಿಯಾನಕ್ಕೆ ಮಮ್ಮೂಟ್ಟಿ ಬ್ರಾಂಡ್ ಅಂಬಾಸಿಡರ್

ಕೊಚ್ಚಿ: 2030ರ ವೇಳೆಗೆ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವು ಮತ್ತು ಗಾಯಗಳ ಪ್ರಮಾಣವನ್ನು ಶೇ.50ರಷ್ಟು ಕಡಿಮೆ ಮಾಡುವ ಗುರಿ ಹೊಂದಿರುವ ಕೇರಳ ಸರ್ಕಾರದ ‘ಜೀವ-ಸುಯಾತ್ರಾ ಮಿಷನ್’ ರಸ್ತೆ ಸುರಕ್ಷತಾ ಅಭಿಯಾನಕ್ಕೆ ಮಲಯಾಳಂ ನಟ ಮಮ್ಮೂಟ್ಟಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ.

ಎರ್ನಾಕುಲಂ ಟೌನ್‌ಹಾಲ್‌ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ವಿ.ಡಿ. ಸತೀಶನ್, ರಾಜ್ಯಾದ್ಯಂತ ರಸ್ತೆ ಸುರಕ್ಷತೆ ಸುಧಾರಿಸಲು ಎಲ್ಲರೂ ಒಗ್ಗೂಡಿ ಶ್ರಮಿಸುವಂತೆ ಕರೆ ನೀಡಿದರು.

ಮಮ್ಮೂಟ್ಟಿ ಅವರ ನೇಮಕವನ್ನು ಘೋಷಿಸಿದ ಅವರು, ಸುರಕ್ಷಿತ ರಸ್ತೆ ನಿರ್ಮಾಣದ ಅಭಿಯಾನಕ್ಕೆ ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಿದರು. ಸಮಗ್ರ ಜಾಗೃತಿ ಮತ್ತು ಸುರಕ್ಷತಾ ಕ್ರಮಗಳ ಮೂಲಕ ಅಪಘಾತಗಳಿಂದ ಉಂಟಾಗುವ ಸಾವು-ನೋವುಗಳನ್ನು ಕಡಿಮೆ ಮಾಡುವುದು ಮಿಷನ್‌ನ ಉದ್ದೇಶವಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರಿಗೆ ಸಚಿವ ಸಿ.ಪಿ. ಜಾನ್ ವಹಿಸಿದ್ದರು. ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್, ಎರ್ನಾಕುಲಂ ಸಂಸದ ಹಿಬಿ ಈಡನ್, ಶಾಸಕ ಟಿ.ಜೆ. ವಿನೋದ್, ಕೊಚ್ಚಿ ಮಹಾನಗರ ಪಾಲಿಕೆ ಮೇಯರ್ ವಿ.ಕೆ. ಮಿನಿಮೋಲ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.