ಇನ್ಮುಂದೆ ಎಲ್ಲಾ ಟ್ಯಾಕ್ಸಿಗಳಿಗೆ ಮೀಟರ್ ಕಡ್ಡಾಯ, ಹಾಫ್ ಹೆಲ್ಮೆಟ್ ನಿಷೇಧ: ಸಚಿವ ಬೈರತಿ ಸುರೇಶ್ | Minister Byrathi Suresh

Minister Byrathi Suresh

ಬೆಂಗಳೂರು: ಇನ್ನು ಮುಂದೆ ಆಟೋರಿಕ್ಷಾಗಳಲ್ಲಿ ಅಳವಡಿಸಿರುವ ರೀತಿಯಲ್ಲಿ ಓಲಾ, ಉಬರ್‌ ಸೇರಿದಂತೆ ಎಲ್ಲಾ ಮಾದರಿಯ ಟ್ಯಾಕ್ಸಿಗಳಿಗೆ(for all taxis) ಮೀಟರ್‌ ಅಳವಡಿಕೆಯನ್ನು ಕಡ್ಡಾಯ(Meters made mandatory )ಮಾಡಲಾಗುತ್ತದೆ. ಸರ್ಕಾರ ನಿಗದಿಪಡಿಸುವ ದರವನ್ನೇ ಟ್ಯಾಕ್ಸಿ ಸಂಸ್ಥೆಗಳು ಪ್ರಯಾಣಿಕರಿಂದ ವಸೂಲಿ ಮಾಡಬೇಕು ಎಂದು ಸಾರಿಗೆ ಸಚಿವ ಬೈರತಿ ಸುರೇಶ್‌(Minister Byrathi Suresh) ತಿಳಿಸಿದರು.

ಒಂದು ವೇಳೆ ಸರ್ಕಾರದ ನೀತಿಯನ್ನು ಉಲ್ಲಂಘಿಸಿ ಸಂಚರಿಸುವ ಟ್ಯಾಕ್ಸಿಗಳನ್ನು ಸೀಜ್‌ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಟ್ಯಾಕ್ಸಿಗಳಿಗೆ ಮೀಟರ್‌ ಅಳವಡಿಕೆಯನ್ನು ಕಡ್ಡಾಯ ಮಾಡುವ ರೂಪುರೇಷೆಗಳು ಮತ್ತು ಕಾನೂನುಗಳನ್ನು ಸಿದ್ಧಪಡಿಸಲಾಗುತ್ತಿದೆ. ಸದ್ಯದಲ್ಲಿಯೇ ಈ ಕಾನೂನನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ ಅವರು, ವಾಹನ ಮಾಲೀಕರು ಮತ್ತು ಚಾಲಕರಿಗೆ ಟ್ಯಾಕ್ಸಿ ಆಪ್‌ ಹೊಂದಿರುವ ಕಂಪನಿಗಳಿಂದ ಆಗುತ್ತಿರುವ ಶೋಷಣೆಯನ್ನು ತಪ್ಪಿಸಲು ಈ ಕಾನೂನು ಜಾರಿಗೊಳಿಸಲಾಗುತ್ತಿದೆ ಎಂದರು.

ಚಾಲಕರಿಂದಲೇ ಬೇಡಿಕೆ

ಅಲ್ಲದೇ, ಆಪ್‌ ಆಧಾರಿತ ಟ್ಯಾಕ್ಸಿ ಸಂಸ್ಥೆಗಳಿಂದ ಶೋಷಣೆಯಾಗುತ್ತಿದೆ. ಈ ಕಾರಣದಿಂದ ಮೀಟರ್‌ ಅಳವಡಿಸಿ ನಮ್ಮ ನೆರವಿಗೆ ಬರಬೇಕೆಂದು ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಇದನ್ನು ಪರಿಗಣಿಸಿ ಮತ್ತು ಸಾವಿರಾರು ಮಾಲೀಕರು ಮತ್ತು ಚಾಲಕರ ಹಿತವನ್ನು ಕಾಯುವ ದೃಷ್ಟಿಯಿಂದ ಮೀಟರ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಾಫ್‌ ಹೆಲ್ಮೆಟ್‌ ನಿಷೇಧ ಕಾಯ್ದೆ ಸಿದ್ಧ

ದ್ವಿಚಕ್ರ ವಾಹನ ಚಾಲಕರು ಮತ್ತು ಸಹ ಪ್ರಯಾಣಿಕರ ರಕ್ಷಣೆ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಹಾಫ್‌ ಹೆಲ್ಮೆಟ್‌ ನಿಷೇಧ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಕಾನೂನು ರೂಪಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದು ಸದ್ಯದಲ್ಲೇ ಜಾರಿಗೆ ತರಲಾಗುತ್ತದೆ. ಹೊಸ ವರ್ಷದ ವೇಳೆಗೆ ಸಂಪೂರ್ಣವಾಗಿ ಹಾಫ್‌ ಹೆಲ್ಮೆಟ್‌ ಅನ್ನು ನಿಷೇಧಿಸುವ ಈ ಕಾಯ್ದೆ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದರು.

ಅದೇ ರೀತಿ ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ದಂಡವನ್ನು ದುಪ್ಪಟ್ಟು ಮಾಡಲಾಗಿದೆ. ಮೊದಲ ಬಾರಿಗೆ ಕಾನೂನು ಉಲ್ಲಂಘನೆ ಮಾಡಿದರೆ 5,000 ರೂಪಾಯಿ ದಂಡ ಮತ್ತು ಎರಡನೇ ಬಾರಿ ಉಲ್ಲಂಘಿಸಿದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿ ಉಲ್ಲಂಘನೆ ಮಾಡಿದರೆ ವಾಹನವನ್ನೇ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಈ ಸಂಬಂಧವೂ ಕಾನೂನು ರೂಪಿಸಲಾಗುತ್ತಿದ್ದು, ಸರ್ಕಾರದ ಅನುಮೋದನೆ ಪಡೆದು ಜಾರಿಗೆ ತರಲಾಗುತ್ತದೆ ಎಂದರು.