ಗೋವಾ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರಾಗಿ ಕೆ.ಜೆ. ಜಾರ್ಜ್ ನೇಮಕ | K J George

K J George appointed as Chairman of the Goa Screening Committee

ನವದೆಹಲಿ: ಮುಂಬರುವ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ(Goa Screening Committee) ಹಾಗೂ ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಈಗಿನಿಂದಲೇ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಈ ಐದೂ ರಾಜ್ಯಗಳಿಗೆ ಪ್ರತ್ಯೇಕ ‘ಸ್ಕ್ರೀನಿಂಗ್ ಕಮಿಟಿ’ಗಳನ್ನು (ಪರಿಶೀಲನಾ ಸಮಿತಿ) ರಚಿಸಿ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಗೋವಾ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರನ್ನಾಗಿ ಇಂಧನ ಸಚಿವ ಕೆ.ಜೆ ಜಾರ್ಜ್(K J George) ಅವರನ್ನು ನೇಮಕ ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷರ ಅನುಮೋದನೆಯೊಂದಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಸಮಿತಿಗಳನ್ನು ನೇಮಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕದ ಹಿರಿಯ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಗೋವಾ ರಾಜ್ಯದ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷ ಸ್ಥಾನದ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ, ರಾಜ್ಯದ ಯುವ ನಾಯಕರಾದ ಬಿ.ವಿ. ಶ್ರೀನಿವಾಸ್ ಮತ್ತು ನಿವೇದಿತ್ ಆಳ್ವಾ ಅವರಿಗೂ ಕ್ರಮವಾಗಿ ಉತ್ತರ ಪ್ರದೇಶ ಹಾಗೂ ಪಂಜಾಬ್ ಸಮಿತಿಗಳಲ್ಲಿ ಸದಸ್ಯರಾಗಿ ಅವಕಾಶ ಕಲ್ಪಿಸಲಾಗಿದೆ.

ರಾಜ್ಯವಾರು ಸಮಿತಿಗಳ ವಿವರ ಹೀಗಿದೆ:

  • ಗೋವಾ: ಕೆ.ಜೆ. ಜಾರ್ಜ್ (ಅಧ್ಯಕ್ಷರು), ಸತೇಜ್ ಡಿ. ಪಾಟೀಲ್ ಮತ್ತು ಶಫಿ ಪರಂಬಿಲ್ (ಸದಸ್ಯರು).

  • ಉತ್ತರ ಪ್ರದೇಶ: ಅಜಯ್ ಮಾಕನ್ (ಅಧ್ಯಕ್ಷರು), ಅಸ್ಲಾಂ ಶೇಖ್ ಮತ್ತು ಬಿ.ವಿ. ಶ್ರೀನಿವಾಸ್ (ಸದಸ್ಯರು).

  • ಪಂಜಾಬ್: ಡಾ. ಸಿರಿವೆಲ್ಲ ಪ್ರಸಾದ್ (ಅಧ್ಯಕ್ಷರು), ಸಚಿನ್ ಸಾವಂತ್ ಮತ್ತು ನಿವೇದಿತ್ ಆಳ್ವಾ (ಸದಸ್ಯರು).

  • ಉತ್ತರಾಖಂಡ: ದೀಪಾ ದಾಸ್‌ಮುನ್ಷಿ (ಅಧ್ಯಕ್ಷರು), ಅನಿಲ್ ಚೌಧರಿ ಮತ್ತು ಪಾಲ್ ಭಾಯ್ ಅಂಬಾಲಿಯಾ (ಸದಸ್ಯರು).

  • ಮಣಿಪುರ: ಬಿ.ಎಂ. ಸಂದೀಪ್ (ಅಧ್ಯಕ್ಷರು), ಹಿಬಿ ಈಡನ್ ಮತ್ತು ರಾಜೇಶ್ ಠಾಕೂರ್ (ಸದಸ್ಯರು).

ಇವರೊಂದಿಗೆ ಆಯಾ ರಾಜ್ಯಗಳ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಅಥವಾ ಉಸ್ತುವಾರಿಗಳು, ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷರು, ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರು ಹಾಗೂ ಉಸ್ತುವಾರಿಗಳ ಜೊತೆಗಿರುವ ಎಐಸಿಸಿ ಕಾರ್ಯದರ್ಶಿಗಳು ಈ ಸಮಿತಿಗಳ ಪದನಿಮಿತ್ತ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಎಐಸಿಸಿ ಸ್ಪಷ್ಟಪಡಿಸಿದೆ