ಬೆಂಗಳೂರು: ಡಿಸೆಂಬರ್ 2ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಪಿಂಚಣಿ ಪಾವತಿ ವಿಳಂಬ ಹಾಗೂ ಬರ ನಿರ್ವಹಣೆ ವೈಫಲ್ಯ ಸೇರಿದಂತೆ ಹಲವು ಜನಪರ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಪ್ರಶ್ನಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಬೇಕಾದ ವಿಷಯಗಳನ್ನು ನಿರ್ಧರಿಸಲಾಗಿದೆ ಎಂದರು. 23 ಲಕ್ಷ ಜನರಿಗೆ ಪಿಂಚಣಿ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಹೆಚ್ಚಾಗಿದ್ದು, ಬೆಳೆ ವಿಮೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ವಿತ್ತೀಯ ನಿರ್ವಹಣೆಯಲ್ಲಿ ಕರ್ನಾಟಕದ ಸ್ಥಾನ ಎರಡರಿಂದ ಹತ್ತಕ್ಕೆ ಕುಸಿದಿದೆ ಎಂದರು.

ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಗುರಿಯಾಗಿಸುತ್ತಿದ್ದಾರೆ. ಪ್ರತಿಭಟನಾಕಾರರು ಹಾಗೂ ಹೇಳಿಕೆ ನೀಡುವವರ ಮೇಲೆ ಬಾಂಡ್ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು. ಪುನೀತ್ ಕೆರೆಹಳ್ಳಿಯನ್ನು ಮೂರು ತಿಂಗಳಿಂದ ಜೈಲಿನಲ್ಲಿಡಲಾಗಿದೆ ಎಂದ ಅವರು, ಈ ಕುರಿತು ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಸಂಬಂಧಪಟ್ಟವರನ್ನು ಭೇಟಿ ಮಾಡಲಿದೆ ಎಂದು ತಿಳಿಸಿದರು.
ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿದು ಜೆಡಿಎಸ್ ಬೆಂಬಲ ಪಡೆಯಬೇಕೆಂಬುದು ಸ್ಥಳೀಯ ಕಾರ್ಯಕರ್ತರ ನಿರೀಕ್ಷೆಯಾಗಿದೆ. ಆದರೆ, ಅಂತಿಮ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದರು. ಕಾಂಗ್ರೆಸ್ ಸರ್ಕಾರ ಬದಲಾಗಬೇಕು, ವಿಧಾನಸಭೆ ವಿಸರ್ಜಿಸಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಗಂಗಾ ನಿವಾಸದ ನವೀಕರಣ ವಿಚಾರವಾಗಿ, ಕುಮಾರಕೃಪಾ ಅತಿಥಿಗೃಹದ ಪಾರಂಪರಿಕ ಕಟ್ಟಡ ಸಂರಕ್ಷಣಾ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಗೆ ಗಂಗಾ ಎಂಬ ಹೆಸರು ಕಳಂಕ ತೊಳೆದುಹಾಕುವುದಿಲ್ಲ ಎಂದು ಟೀಕಿಸಿದರು.



