ಬೆಂಗಳೂರು: ಅರಣ್ಯ ನಾಶ, ಜೀವ ಸಂಕುಲಕ್ಕೆ ಹಾನಿ ಸೇರಿದಂತೆ ಇತರೆ ಕಾರಣಗಳಿಂದಾಗಿ ಅನುಮತಿ ಪಡೆದು, ಕಾಂತಾರಾ-2 ಚಿತ್ರೀಕರಣದಲ್ಲಿ ತೊಡಗಿದ್ದಂತ ಚಿತ್ರೀಕರಣವನ್ನು ನಿಲ್ಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ಈ ಕುರಿತಂತೆ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತ ಬಳಿ ಇರುವ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ದಿ.03.01.2025 ರಿಂದ 15.01.2025 ರವರೆಗೆ ತಾತ್ಕಾಲಿಕ ಸೆಟ್ ನಿರ್ಮಾಣ ಮಾಡಿಕೊಳ್ಳಲು ಹಾಗೂ ದಿ.15.01.2025 ರಿಂದ 25.01.2025 ರವರೆಗೆ ಒಟ್ಟು 23 ದಿನ ಕಾಂತಾರಾ ಚಾಪ್ಟರ್ 1 ಚಿತ್ರೀಕರಣಕ್ಕೆ ಷರತ್ತುಬದ್ಧ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಕಾಂತಾರಾ ತಂಡ ಕಾಡಿನಂಚಿನ ಪರಿಭಾವಿತ ಅರಣ್ಯ ಪ್ರದೇಶದ ಬಳಿ ನಡೆಸುತ್ತಿರುವ ಚಿತ್ರೀಕರಣದ ವೇಳೆ ಸ್ಫೋಟಕ ಬಳಸುತ್ತಿದ್ದು, ಇದರಿಂದ ವನ್ಯಜೀವಿಗಳು ವಿಚಲಿತವಾಗುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿರುತ್ತದೆ ಎಂದು ಹೇಳಿದ್ದಾರೆ.
ಇಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಚಿತ್ರತಂಡದಿಂದ ಒಂದೊಮ್ಮೆ ಷರತ್ತುಗಳ ಉಲ್ಲಂಘನೆಯಾಗಿ, ವನ್ಯಜೀವಿಗಳಿಗೆ ಅಥವಾ ಸಸ್ಯ ಸಂಕುಲಕ್ಕೆ ಯಾವುದೇ ಹಾನಿ ಆಗಿದ್ದಲ್ಲಿ ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದ್ದಾರೆ.




