ಬೀದರ್: ದೇಶಾದ್ಯಂತ ಅಡುಗೆ ಅನಿಲ (LPG) ಬಿಕ್ಕಟ್ಟು ತಲೆದೋರಿರುವ ಬೆನ್ನಲ್ಲೇ, ಶಾಲಾ ಮಕ್ಕಳ ಬಿಸಿಯೂಟಕ್ಕಾಗಿ ತಂದಿದ್ದ ಗ್ಯಾಸ್ ಸಿಲಿಂಡರ್‌ಗಳನ್ನೇ ಖದೀಮರು ಹೊತ್ತೊಯ್ದಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿವರ: ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ(ಬಿ) ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಈ ಕಳ್ಳತನ ನಡೆದಿದೆ. ಇಂದು (ಮಾರ್ಚ್ 23) ಬೆಳಿಗ್ಗೆ ಶಿಕ್ಷಕರು ಶಾಲೆಗೆ ಬಂದಾಗ ಅಡುಗೆ ಕೋಣೆಯ ಬೀಗ ಮುರಿದಿರುವುದು ಕಂಡುಬಂದಿದೆ. ಒಳಗೆ ಪರಿಶೀಲಿಸಿದಾಗ ಅಡುಗೆ ಮಾಡಲು ಇಟ್ಟಿದ್ದ ಅನಿಲ ತುಂಬಿದ 6 ಸಿಲಿಂಡರ್‌ಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಮಕ್ಕಳ ಬಿಸಿಯೂಟಕ್ಕೆ ತೊಂದರೆ: ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆಗಾಗಿ ಈ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಲಾಗಿತ್ತು. ಗ್ಯಾಸ್ ಸಿಲಿಂಡರ್ ಕಳ್ಳತನವಾಗಿರುವುದರಿಂದ ಇಂದು ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಭಾರಿ ತೊಂದರೆಯುಂಟಾಗಿದೆ. ಗ್ಯಾಸ್ ಅಭಾವ ಇರುವ ಈ ಸಮಯದಲ್ಲಿ ಸಿಲಿಂಡರ್‌ಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ.
ಪೊಲೀಸ್ ತನಿಖೆ: ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಲಿಂಡರ್ ಕಳ್ಳತನ ಮಾಡಿದ ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.




