ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯ(Annabaghya Scheme) ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಮಿಂಚಿನ ದಾಳಿಗಳಲ್ಲಿ ಬರೋಬ್ಬರಿ 8.80 ಕೋಟಿ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿಯನ್ನು(Annabaghya Rice) ಜಪ್ತಿ ಮಾಡಲಾಗಿದೆ.
ಈ ಅಕ್ರಮ ದಂಧೆಯಲ್ಲಿ ತೊಡಗಿದ್ದ ಜಾಲಗಳ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳು, ಅಕ್ಕಿಯ ಜೊತೆಗೆ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಡುಗೆ ಅನಿಲ ಸಿಲಿಂಡರ್ಗಳು, ಪೆಟ್ರೋಲ್, ಡೀಸೆಲ್ ಹಾಗೂ ಸಾಗಾಣಿಕೆಗೆ ಬಳಸುತ್ತಿದ್ದ ವಾಹನಗಳು ಸೇರಿದಂತೆ ಒಟ್ಟು ಸುಮಾರು 15 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ರಾಜ್ಯಾದ್ಯಂತ 266 ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ.
ವಾಹನ, ಸಿಲಿಂಡರ್ ಹಾಗೂ ಇಂಧನವೂ ಮುಟ್ಟುಗೋಲು:
ಆಹಾರ ಇಲಾಖೆಯ ವಿಶೇಷ ತಂಡಗಳು ನಡೆಸಿದ ಈ ಕಾರ್ಯಾಚರಣೆಯಲ್ಲಿ ಒಟ್ಟು 32,384 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು, ಇದರ ಮಾರುಕಟ್ಟೆ ಮೌಲ್ಯ 8.80 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಕಳ್ಳಸಾಗಣೆಗೆ ಬಳಕೆಯಾಗುತ್ತಿದ್ದ 6.17 ಕೋಟಿ ರೂ. ಮೌಲ್ಯದ 220 ವಾಹನಗಳು, 1,817 ಎಲ್ಪಿಜಿ ಸಿಲಿಂಡರ್ಗಳು ಹಾಗೂ 14,258 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೋಲಾರದಲ್ಲಿ ಅತಿ ಹೆಚ್ಚು ಅಕ್ಕಿ ಪತ್ತೆ:
ರಾಜ್ಯದ ಐದು ಪ್ರಮುಖ ಜಿಲ್ಲೆಗಳಲ್ಲಿ ಈ ಅಕ್ರಮ ದಂಧೆ ವ್ಯಾಪಕವಾಗಿರುವುದು ದಾಳಿಯ ವೇಳೆ ಬಯಲಾಗಿದೆ. ಜಿಲ್ಲಾವಾರು ಜಪ್ತಿಯಾದ ಅಕ್ಕಿಯ ಮೌಲ್ಯವನ್ನು ಗಮನಿಸಿದರೆ ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 3.81 ಕೋಟಿ ರೂ. ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದಂತೆ ಬೆಳಗಾವಿಯಲ್ಲಿ 1.57 ಕೋಟಿ ರೂ., ಕಲಬುರಗಿಯಲ್ಲಿ 1.49 ಕೋಟಿ ರೂ., ವಿಜಯಪುರದಲ್ಲಿ 1.02 ಕೋಟಿ ರೂ. ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 91.62 ಲಕ್ಷ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.
ಬಡವರ ಹಸಿವು ನೀಗಿಸಲು ನೀಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಇಲಾಖೆ ಕಠಿಣ ನಿಲುವು ತಳೆದಿದ್ದು, ಮುಂದಿನ ದಿನಗಳಲ್ಲೂ ರಾಜ್ಯಾದ್ಯಂತ ಇಂತಹ ದಾಳಿಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.




