ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಸೋಲನ್ನು ಕಾಂಗ್ರೆಸ್ ವಿನಮ್ರವಾಗಿ ಒಪ್ಪಿಕೊಂಡಿದ್ದು, ಪಕ್ಷವನ್ನು ಬಲಪಡಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸಹಜ. ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಹಿಂದೆ ಇದ್ದರು. ಪುಟ್ಟಣ್ಣ ಕೂಡ ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದವರು. ಕಾಂಗ್ರೆಸ್ಗೆ ಮತ ನೀಡಿದ ಪದವೀಧರರು ಮತ್ತು ಶಿಕ್ಷಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸೋಲಿನ ನಿರ್ದಿಷ್ಟ ಕಾರಣ ಹೇಳಲು ಹೋಗುವುದಿಲ್ಲ ಎಂದರು.
ಎನ್ಡಿಎ ಮೈತ್ರಿ ಕಾಂಗ್ರೆಸ್ಗೆ ಸವಾಲಾಗಿದೆಯೇ ಎಂಬ ಪ್ರಶ್ನೆಗೆ, ಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟು ಅಧಿಕಾರಕ್ಕೆ ಬರುವವರೆಗೆ ಮಾತ್ರ ಎಂದು ಉತ್ತರಿಸಿದರು. ಆದರೆ ಎರಡೂ ಪಕ್ಷಗಳ ಮೈತ್ರಿಯಿಂದ ಅಪಾಯವಿದೆ. ಮುಂದಿನ ದಿನಗಳಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ. ಬಿಜೆಪಿ ಒಬ್ಬರೇ ಕಾಂಗ್ರೆಸ್ನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರನ್ನು ಮುಂದೆ ತಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ರಣತಂತ್ರ ರೂಪಿಸಲಿದೆ ಎಂದರು.

ಸ್ಟಿಂಗ್ ಕಾರ್ಯಾಚರಣೆ ಮತ್ತು ನಾಯಕತ್ವ ಬದಲಾವಣೆ ವಿಚಾರಗಳಿಂದಲೇ ಕಾಂಗ್ರೆಸ್ ಸೋತಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾಯಕತ್ವ ಬದಲಾವಣೆ ಸೋಲಿಗೆ ಕಾರಣವಲ್ಲ. ಕಾಂಗ್ರೆಸ್ ನಾಯಕರು ಸಮನ್ವಯದಿಂದ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕರ್ತರಿಗೆ ಸ್ವಲ್ಪ ನೋವಿದೆ. ಆದರೆ ಅವರು ಸಕ್ರಿಯವಾಗಿ ಚುನಾವಣೆಯಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕರ್ತರ ಕಡೆಗಣನೆಯೇ ಸೋಲಿಗೆ ಕಾರಣವಲ್ಲ. ಮುಂದಿನ ತಿಂಗಳು ನಿಗಮ ಮಂಡಳಿಗಳಿಗೆ ಹೊಸಬರನ್ನು ನೇಮಕ ಮಾಡಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ದುರಾಡಳಿತ ಎಂದು ಒಪ್ಪುವುದಿಲ್ಲ. ಸಣ್ಣಪುಟ್ಟ ವೈಫಲ್ಯಗಳಿದ್ದರೆ ಅವುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುತ್ತೇವೆ. ಎಲ್ಲ ಸಮುದಾಯಗಳಿಗೂ ಸರ್ಕಾರ ಯೋಜನೆಗಳನ್ನು ನೀಡಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಹಿರಿಯ ನಾಯಕರೆಂಬ ಕಾರಣಕ್ಕೆ ಭೇಟಿಯಾಗಿದ್ದಾಗಿ ಹೇಳಿದ ಅವರು, ನವೆಂಬರ್ನಲ್ಲಿ ದೆಹಲಿಯಲ್ಲಿ ನಡೆಯುವ ಮಹಾರ್ಯಾಲಿಗೆ ಮುಖ್ಯಮಂತ್ರಿ ತೆರಳಿದಾಗ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಬಹುದು ಎಂದರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಡಿಸೆಂಬರ್ 31ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



