ಖಾರ್ಟೌಮ್: ಈಶಾನ್ಯ ಸುಡಾನ್ನ ಕೆಂಪು ಸಮುದ್ರ ರಾಜ್ಯದ ಒನಿ ಪ್ರದೇಶದಲ್ಲಿ ಚಿನ್ನದ ಗಣಿಯ ಸುರಂಗ ಕುಸಿದು ಸಂಭವಿಸಿದ ದುರಂತದಲ್ಲಿ ಕನಿಷ್ಠ 11 ಕಾರ್ಮಿಕರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶನಿವಾರ ರಾತ್ರಿ ಗಣಿ ಕುಸಿಯಲು ಆರಂಭಿಸಿದ್ದು, ಭಾನುವಾರದ ವೇಳೆಗೆ ಅವಶೇಷಗಳಿಂದ 11 ಮೃತದೇಹಗಳನ್ನು ಹೊರತೆಗೆಯಲಾಗಿದೆ. 30 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸುಡಾನ್ ಮಿನರಲ್ ರಿಸೋರ್ಸಸ್ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಸುಡಾನ್ನಲ್ಲಿ ಅನಧಿಕೃತ ಚಿನ್ನದ ಗಣಿ ಕುಸಿದಿರುವ ಎರಡನೇ ಘಟನೆ ಇದಾಗಿದೆ. ಗಣಿಗಾರಿಕೆ ಪ್ರದೇಶಗಳಲ್ಲಿ ಸುರಕ್ಷತಾ ಮಾನದಂಡಗಳ ಕೊರತೆಯಿಂದ ಇಂತಹ ದುರಂತಗಳು ಪದೇಪದೆ ಸಂಭವಿಸುತ್ತಿವೆ ಎಂದು ವರದಿಯಾಗಿದೆ.
ಕಳೆದ ವಾರ ಪಶ್ಚಿಮ ಸುಡಾನ್ನಲ್ಲಿ ನಡೆದ ಮತ್ತೊಂದು ಚಿನ್ನದ ಗಣಿ ಕುಸಿತದಲ್ಲಿ ಕನಿಷ್ಠ 82 ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೊಂದು ದುರಂತ ಕೂಡಾ ಭಾರೀ ಸಾವು-ನೋವಿಗೆ ಸಾಕ್ಷಿಯಾಗಿದೆ.



