ಹೈದರಾಬಾದ್: ತೆಲಂಗಾಣದಲ್ಲಿ ‘ಭಾರತ ಶೃಂಗಸಭೆ’ ಆಯೋಜಿಸಲಾಗುತ್ತಿದ್ದು, 70 ದೇಶಗಳಿಂದ ಸುಮಾರು 1,000 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ತಿಳಿಸಿದ್ದಾರೆ.
ಶೃಂಗಸಭೆಯಲ್ಲಿ ಪರಿಸರ, ಮೂಲಸೌಕರ್ಯ, ಹೂಡಿಕೆ, ಆರ್ಥಿಕ ಬೆಳವಣಿಗೆ ಮತ್ತು ಪ್ರಜಾಪ್ರಭುತ್ವ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ವಿವಿಧ ದೇಶಗಳ ತಜ್ಞರು ಮತ್ತು ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇದು ವೇದಿಕೆಯಾಗಲಿದೆ.
ಶೃಂಗಸಭೆಯಲ್ಲಿ ಹೊರಹೊಮ್ಮುವ ಶಿಫಾರಸುಗಳು ಮತ್ತು ನಿರ್ಣಯಗಳನ್ನು ತೆಲಂಗಾಣದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ತೆಲಂಗಾಣ ಸರ್ಕಾರದ ‘ಗಿಗ್ ವರ್ಕರ್ಸ್ ನೀತಿ’ಯನ್ನು ಜನರಿಗೆ ಸಮರ್ಪಿಸಲಿದ್ದಾರೆ. ಜತೆಗೆ ದೇಶದ ಪರವಾಗಿ ಸಂದೇಶವನ್ನೂ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸುಸ್ಥಿರ ಅಭಿವೃದ್ಧಿ, ಆರ್ಥಿಕ ಪ್ರಗತಿ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಕುರಿತು ಜಾಗತಿಕ ಚರ್ಚೆಗೆ ವೇದಿಕೆ ಕಲ್ಪಿಸುವುದು ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ.



