ನವದೆಹಲಿ: ಹೈದರಾಬಾದ್ನಲ್ಲಿ ನಡೆದ ‘ಭಾರತ್ ಶೃಂಗಸಭೆ–2026’ ಆಯೋಜನೆ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶೃಂಗಸಭೆಯಲ್ಲಿ ಭಾಗವಹಿಸಿದ ಭಾಷಣಕಾರರ ಆಯ್ಕೆಯನ್ನು ಪ್ರಶ್ನಿಸಿರುವ ಅವರು, ಕಾರ್ಯಕ್ರಮವನ್ನು ‘ಆ್ಯಂಟಿ-ಭಾರತ್ ಶೃಂಗಸಭೆ’ ಎಂದು ಕರೆದಿದ್ದಾರೆ.
ನವೆಂಬರ್ 13 ಮತ್ತು 14ರಂದು ನಡೆದ ಈ ಶೃಂಗಸಭೆಯು ಕೇಂದ್ರ ಸರ್ಕಾರದ ವಿಶ್ವಾಸಾರ್ಹತೆ ಕುಗ್ಗಿಸುವ ತಪ್ಪುಮಾಹಿತಿ ಹಾಗೂ ಸೈದ್ಧಾಂತಿಕ ಜಾಲದ ಭಾಗವಾಗಿದೆ ಎಂದು ದುಬೆ ‘ಎಕ್ಸ್’ನಲ್ಲಿ ಆರೋಪಿಸಿದ್ದಾರೆ. ಕಾಂಗ್ರೆಸ್ ಮತ್ತು ತೆಲಂಗಾಣ ಸರ್ಕಾರದ ಸಹಯೋಗದಲ್ಲಿ ನಡೆದ ಕಾರ್ಯಕ್ರಮವು ಭಾರತದ ರಾಜಕೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.

ದಲಿತ ಹಕ್ಕುಗಳ ಹೋರಾಟಗಾರ ಕಾಂಚಾ ಇಲಯ್ಯ ಶೆಫರ್ಡ್, ಅಮ್ನೆಸ್ಟಿ ಇಂಟರ್ನ್ಯಾಷನಲ್ನ ಮಾಜಿ ಪ್ರಧಾನ ಕಾರ್ಯದರ್ಶಿ ಸಲಿಲ್ ಶೆಟ್ಟಿ, ಅರ್ಥಶಾಸ್ತ್ರಜ್ಞರಾದ ಜಯತಿ ಘೋಷ್, ರತಿನ್ ರಾಯ್, ಹಿಮಾಂಶು ಸೇರಿದಂತೆ ಹಲವು ಗಣ್ಯರು ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಮಲೇಷ್ಯಾದ ಮಾಜಿ ಸಂಸದೆ ನೂರುಲ್ ಇಜ್ಜಾ ಅನ್ವರ್, ದಕ್ಷಿಣ ಆಫ್ರಿಕಾದ ರಾಜಕಾರಣಿ ಇಬ್ರಾಹಿಂ ಪಟೇಲ್ ಹಾಗೂ ಥಾಯ್ಲೆಂಡ್ನ ರಾಜಕಾರಣಿ ಥಾನಥಾರ್ನ್ ಜುವಾಂಗ್ರೂಂಗ್ಕಿಟ್ ಕೂಡ ಪಾಲ್ಗೊಂಡಿದ್ದರು.
ಈ ಗಣ್ಯರು ಒಟ್ಟಾಗಿ ‘ಬ್ರೇಕ್ ಇಂಡಿಯಾ’ ಕಾರ್ಯತಂತ್ರದ ಭಾಗವಾಗಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ಟೀಕಿಸುವವರನ್ನೇ ಉದ್ದೇಶಪೂರ್ವಕವಾಗಿ ಆಹ್ವಾನಿಸಲಾಗಿದೆ ಎಂದಿದ್ದಾರೆ.
ಭಾಷಣಕಾರರ ಉದ್ದೇಶ ಮತ್ತು ಕಾರ್ಯವಿಧಾನಗಳನ್ನು ವಿವರಿಸುವ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿರುವ ದುಬೆ, ಕಾಂಗ್ರೆಸ್ ವಿವಿಧ ಶಕ್ತಿಗಳನ್ನು ಒಗ್ಗೂಡಿಸುವ ‘ವಿಘಟನೆಯ ಛತ್ರಿ’ಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಅವರ ಪ್ರಚಾರಕ್ಕಾಗಿ ಸಾರ್ವಜನಿಕ ಹಣ ಬಳಸಲಾಗುತ್ತಿದೆ ಎಂಬ ಆರೋಪವನ್ನೂ ಬಿಜೆಪಿ ಮಾಡಿದೆ.



