ಇದು ಶಾಕ್ ಆದ್ರೂ ಸತ್ಯ! ಮೊದಲ ಬಾರಿಗೆ ಗರ್ಭದಲ್ಲಿದ್ದ ಭ್ರೂಣಕ್ಕೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ | Open Foetal Surgery

It may come as a shock but its true Doctors successfully perform surgery on a fetus in the womb for the first time

ನವದೆಹಲಿ: ಭಾರತೀಯ ವೈದ್ಯಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (AIIMS) ವೈದ್ಯರು ದೇಶದಲ್ಲೇ ಮೊದಲ ಬಾರಿಗೆ ಗರ್ಭದಲ್ಲಿರುವ ಭ್ರೂಣಕ್ಕೆ ‘ಓಪನ್ ಫೀಟಲ್ ಸರ್ಜರಿ’ (Open Foetal Surgery) ಯಶಸ್ವಿಯಾಗಿ ನೆರವೇರಿಸಿದ್ದಾರೆ. ಹುಟ್ಟಲಿರುವ ಮಗುವಿನ ಬೆನ್ನುಹುರಿಯಲ್ಲಿ ಕಂಡುಬಂದಿದ್ದ ಗಂಭೀರ ದೋಷವನ್ನು ಸರಿಪಡಿಸಲು ಹಾಗೂ ಬೆಳೆಯುತ್ತಿರುವ ಬೆನ್ನುಹುರಿಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಯಲು ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಐದು ವಾರಗಳ ಸುದೀರ್ಘ ಯೋಜನೆ ಮತ್ತು ಭ್ರೂಣದ ಸೂಕ್ಷ್ಮ ವಿಶ್ಲೇಷಣೆಯ ನಂತರ, ಏಮ್ಸ್ ನರವಿಜ್ಞಾನ ಕೇಂದ್ರದಲ್ಲಿ (Neurosciences Centre) ಸುಮಾರು 30 ವೈದ್ಯರು ಮತ್ತು ನರ್ಸ್‌ಗಳ ತಂಡವು ಬರೋಬ್ಬರಿ ಆರು ಗಂಟೆಗಳ ಕಾಲ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ವಿಶೇಷವೆಂದರೆ, ಕೇಂದ್ರ ಸರ್ಕಾರದ ‘ಜನನಿ ಶಿಶು ಸುರಕ್ಷಾ ಕಾರ್ಯಕ್ರಮ’ (JSSK) ಅಡಿಯಲ್ಲಿ ಈ ದುಬಾರಿ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗಿದೆ.

ಏನಿದು ಲಂಬೋಸ್ಯಾಕ್ರಲ್ ಮೈಲೋಮೆನಿಂಗೋಸಿಲ್ (Lumbosacral Myelomeningocele)?

ಇದು ‘ಸ್ಪೈನಾ ಬೈಫಿಡಾ’ (Spina Bifida) ಎಂಬ ಜನ್ಮಜಾತ ನರನಾಳ ದೋಷದ (Neural Tube Defect) ಅತ್ಯಂತ ಗಂಭೀರ ರೂಪವಾಗಿದೆ. ಮಗು ಹುಟ್ಟುವ ಮೊದಲೇ ಬೆನ್ನುಮೂಳೆ ಮತ್ತು ಬೆನ್ನುಹುರಿಯ ಕಾಲುವೆ ಸಂಪೂರ್ಣವಾಗಿ ಮುಚ್ಚಿಕೊಳ್ಳದಿದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಬೆನ್ನಿನ ಭಾಗದಲ್ಲಿ ದ್ರವ ತುಂಬಿದ ಚೀಲವೊಂದು ಹೊರಚಾಚಿಕೊಂಡಿದ್ದು, ಅದರಲ್ಲಿ ಸೆರೆಬ್ರೊಸ್ಪೈನಲ್ ದ್ರವ (Cerebrospinal fluid), ನರಗಳು ಮತ್ತು ಬೆನ್ನುಹುರಿಯ ಭಾಗವಿರುತ್ತದೆ. ಗರ್ಭಾವಸ್ಥೆಯ ಸ್ಕ್ಯಾನಿಂಗ್ ವೇಳೆ ಇದನ್ನು ಪತ್ತೆಹಚ್ಚಲಾಗುತ್ತದೆ. ತೆರೆದುಕೊಂಡಿರುವ ಬೆನ್ನುಹುರಿಗೆ ಹಾನಿಯಾದರೆ ಮಗುವಿಗೆ ಕಾಲುಗಳ ದೌರ್ಬಲ್ಯ, ಪಾರ್ಶ್ವವಾಯು (Paralysis), ಸಂವೇದನಾ ಶಕ್ತಿ ನಷ್ಟ ಹಾಗೂ ಮಲ-ಮೂತ್ರ ವಿಸರ್ಜನೆಯ ನಿಯಂತ್ರಣ ತಪ್ಪುವಂತಹ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಗರ್ಭದಲ್ಲಿರುವಾಗಲೇ ಸೋರಿಕೆಯಾಗುತ್ತಿದ್ದ ಸೆರೆಬ್ರೊಸ್ಪೈನಲ್ ದ್ರವವನ್ನು ತಡೆಯುವುದು ಈ ಶಸ್ತ್ರಚಿಕಿತ್ಸೆಯ ಮುಖ್ಯ ಉದ್ದೇಶವಾಗಿತ್ತು.

ವೈದ್ಯರು ಮತ್ತು ತಜ್ಞರು ಏನಂತಾರೆ?

ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ದೆಹಲಿ ಏಮ್ಸ್‌ನ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪಿ.ಎಸ್. ಚಂದ್ರ ಮಾತನಾಡಿ, “ವಿದೇಶಗಳಲ್ಲಿ ಭ್ರೂಣದ ಶಸ್ತ್ರಚಿಕಿತ್ಸೆ ಕೆಲವು ಸಮಯದಿಂದ ನಡೆಯುತ್ತಿದೆಯಾದರೂ, ಭಾರತದಲ್ಲಿ ಈ ಪ್ರಯತ್ನ ಯಶಸ್ವಿಯಾಗಿರುವುದು ಶ್ಲಾಘನೀಯ. ಮಗು ಜನಿಸುವ ಮೊದಲೇ ಶಸ್ತ್ರಚಿಕಿತ್ಸೆ ಮಾಡುವುದರಿಂದ ಮೆದುಳಿನಲ್ಲಿ ನೀರು ತುಂಬುವ (Hydrocephalus) ಮತ್ತು ‘ಚಿಯಾರಿ ವಿರೂಪತೆ’ಯ (Chiari Malformations) ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು” ಎಂದು ತಿಳಿಸಿದ್ದಾರೆ.

ಇಂಡಿಯನ್ ಸೊಸೈಟಿ ಫಾರ್ ಪೀಡಿಯಾಟ್ರಿಕ್ ನ್ಯೂರೋಸರ್ಜರಿಯ ಅಧ್ಯಕ್ಷ ಡಾ. ದೀಪಕ್ ಗುಪ್ತಾ ಪ್ರತಿಕ್ರಿಯಿಸಿ, “ಈ ಶಸ್ತ್ರಚಿಕಿತ್ಸೆಯು ಭಾರತದಲ್ಲಿ ಭ್ರೂಣದ ಆರೈಕೆ ಮತ್ತು ಮಕ್ಕಳ ನರಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇದು ಸಂಪೂರ್ಣ ಗುಣಪಡಿಸುವ ಚಿಕಿತ್ಸೆಯಲ್ಲದಿದ್ದರೂ, ನರ ಅಂಗಾಂಶಗಳಿಗೆ ಆಗುವ ನಿರಂತರ ಹಾನಿಯನ್ನು ತಡೆಯುತ್ತದೆ ಮತ್ತು ದೀರ್ಘಕಾಲೀನ ಆರೈಕೆಯೊಂದಿಗೆ ಮಗುವಿನ ನರ ಸಂಬಂಧಿ ಬೆಳವಣಿಗೆಯನ್ನು ಸುಧಾರಿಸುತ್ತದೆ” ಎಂದಿದ್ದಾರೆ. 14 ವರ್ಷಗಳ ಹಿಂದೆ ಏಮ್ಸ್‌ನಲ್ಲಿ ಕಂಡಿದ್ದ ಕನಸು ಇಂದು ನನಸಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಭಾರತದ ಕುಟುಂಬಗಳಿಗೆ ಸುರಕ್ಷಿತವಾಗಿ ಮತ್ತು ಸುಲಭವಾಗಿ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಆಸ್ಪತ್ರೆ ತಿಳಿಸಿದೆ.

ಶಸ್ತ್ರಚಿಕಿತ್ಸೆಯ ಅಪಾಯಗಳು ಮತ್ತು ಮುನ್ನೆಚ್ಚರಿಕೆ:

ಅಂತಾರಾಷ್ಟ್ರೀಯ ಅಧ್ಯಯನಗಳ (MOMS trial) ಪ್ರಕಾರ, ಜನನದ ನಂತರ ಶಸ್ತ್ರಚಿಕಿತ್ಸೆಗೊಳಗಾದ ಶೇ. 82ರಷ್ಟು ಮಕ್ಕಳಿಗೆ ಮೆದುಳಿನ ದ್ರವ ಹೊರಹಾಕಲು ಶಂಟ್ (Shunt) ಅಳವಡಿಸುವ ಅಗತ್ಯವಿದ್ದರೆ, ಗರ್ಭದಲ್ಲೇ ಶಸ್ತ್ರಚಿಕಿತ್ಸೆಗೊಳಗಾದ ಮಕ್ಕಳಲ್ಲಿ ಈ ಪ್ರಮಾಣ ಶೇ. 40ಕ್ಕೆ ಇಳಿದಿದೆ. ಆದಾಗ್ಯೂ, ಗರ್ಭಾವಸ್ಥೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದು ಅಕಾಲಿಕ ಹೆರಿಗೆ (Preterm Delivery), ರಕ್ತಸ್ರಾವ, ಸೋಂಕು ಮತ್ತು ಗರ್ಭಾಶಯದ ಗಾಯದಂತಹ ಅಪಾಯಗಳನ್ನು ಹೊಂದಿರುತ್ತದೆ. ಹೀಗಾಗಿ, ತಾಯಿ ಮತ್ತು ಭ್ರೂಣದ ಸುರಕ್ಷತೆಗಾಗಿ ಸೂಕ್ತ ಸಮಾಲೋಚನೆ, ಉನ್ನತ ಮಟ್ಟದ ಅರಿವಳಿಕೆ (Anaesthesia) ಮತ್ತು ಹೆರಿಗೆಯವರೆಗೂ ತೀವ್ರ ನಿಗಾ ಅತ್ಯಗತ್ಯವಾಗಿರುತ್ತದೆ.

ಫೋಲಿಕ್ ಆಸಿಡ್ ಸೇವನೆಯೇ ಅತ್ಯುತ್ತಮ ತಡೆಗಟ್ಟುವಿಕೆ:

ಭ್ರೂಣದ ಶಸ್ತ್ರಚಿಕಿತ್ಸೆಯು ಕೇವಲ ಆಯ್ದ ಪ್ರಕರಣಗಳಿಗೆ ಮಾತ್ರ ಲಭ್ಯವಿರುವ ಚಿಕಿತ್ಸೆಯೇ ಹೊರತು, ನರನಾಳ ದೋಷಗಳನ್ನು ತಡೆಗಟ್ಟಲು ಪರ್ಯಾಯವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಗರ್ಭಧಾರಣೆಯಾದ ಸುಮಾರು 28 ದಿನಗಳಲ್ಲಿ (ಮಹಿಳೆಗೆ ತಾನು ಗರ್ಭಿಣಿ ಎಂದು ತಿಳಿಯುವ ಮೊದಲೇ) ಭ್ರೂಣದ ನರನಾಳ ಮುಚ್ಚಿಕೊಳ್ಳುತ್ತದೆ. ಆದ್ದರಿಂದ, ಗರ್ಭಧಾರಣೆಗೆ ಮುನ್ನವೇ ‘ಫೋಲಿಕ್ ಆಸಿಡ್’ (Folic Acid) ಸೇವನೆಯ ಕುರಿತು ಸಲಹೆ ಪಡೆಯುವುದು ಮತ್ತು ಪೌಷ್ಟಿಕ ಆಹಾರ ಸೇವಿಸುವುದು ಇಂತಹ ಜನ್ಮಜಾತ ದೋಷಗಳನ್ನು ತಡೆಯಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ವೈದ್ಯರು ಕಿವಿಮಾತು ಹೇಳಿದ್ದಾರೆ.