ವನವಾಟು: ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿರುವ ದ್ವೀಪ ರಾಷ್ಟ್ರ ವನವಾಟು ಶನಿವಾರ ಮುಂಜಾನೆ ಸಂಭವಿಸಿದ ಮೂರು ಪ್ರಬಲ ಭೂಕಂಪಗಳಿಂದ ನಡುಗಿದೆ. ರಿಕ್ಟರ್ ಮಾಪಕದಲ್ಲಿ 7.2, 6.9 ಹಾಗೂ 6.3 ತೀವ್ರತೆಯ ಕಂಪನಗಳು ಕೆಲವೇ ನಿಮಿಷಗಳ ಅಂತರದಲ್ಲಿ ಸಂಭವಿಸಿದ್ದು, ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಭೀತಿ ಸೃಷ್ಟಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಭಾರತೀಯ ಕಾಲಮಾನ ಬೆಳಗ್ಗೆ ಸುಮಾರು 8.12ಕ್ಕೆ ಮೊದಲ ಹಾಗೂ ಅತ್ಯಂತ ಪ್ರಬಲವಾದ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ವನವಾಟುವಿನ ಟೋರ್ಬಾ ಪ್ರಾಂತ್ಯದ ಸೋಲಾ ಪಟ್ಟಣದ ಪಶ್ಚಿಮಕ್ಕೆ ಸುಮಾರು 200 ಕಿ.ಮೀ ದೂರದಲ್ಲಿ ಸಮುದ್ರದಾಳದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.
ಇದಾದ ಕೆಲವೇ ನಿಮಿಷಗಳಲ್ಲಿ 6.9 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ. ಸನ್ಮಾ ಪ್ರಾಂತ್ಯದ ಎಸ್ಪಿರಿಟು ಸ್ಯಾಂಟೋ ದ್ವೀಪದ ಪೋರ್ಟ್ ಓಲ್ರಿ ಗ್ರಾಮದ ವಾಯುವ್ಯಕ್ಕೆ ಸುಮಾರು 197 ಕಿ.ಮೀ ದೂರದಲ್ಲಿ ಈ ಕಂಪನ ದಾಖಲಾಗಿದೆ. ನಂತರ ಕೇವಲ 11 ನಿಮಿಷಗಳ ಅಂತರದಲ್ಲಿ 6.3 ತೀವ್ರತೆಯ ಮೂರನೇ ಭೂಕಂಪ ಸಂಭವಿಸಿದ್ದು, ಇದು ಸಮುದ್ರದ ಸುಮಾರು 10 ಕಿ.ಮೀ ಆಳದಲ್ಲಿ ದಾಖಲಾಗಿದೆ.

ಸುನಾಮಿ ಭೀತಿ; ಜನರಿಗೆ ಎಚ್ಚರಿಕೆ
ಸತತ ಭೂಕಂಪನಗಳಿಂದ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಅಲೆಗಳು ಅಪ್ಪಳಿಸುವ ಆತಂಕ ಎದುರಾಗಿದೆ. ಸಮುದ್ರ ತೀರದಿಂದ ದೂರವಿದ್ದು, ಸುರಕ್ಷಿತ ಹಾಗೂ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸ್ಥಳೀಯ ಆಡಳಿತ ಜನರಿಗೆ ಸೂಚಿಸಿದೆ. ಸದ್ಯದ ವರದಿಗಳ ಪ್ರಕಾರ, ಭಾರೀ ಅಲೆಗಳು ದಡಕ್ಕೆ ಅಪ್ಪಳಿಸಿರುವ ಅಥವಾ ದೊಡ್ಡ ಪ್ರಮಾಣದ ಸಾವು-ನೋವು ಸಂಭವಿಸಿರುವ ಮಾಹಿತಿ ಲಭ್ಯವಾಗಿಲ್ಲ.
ರಿಂಗ್ ಆಫ್ ಫೈರ್ ವಲಯದಲ್ಲಿ ವನವಾಟು
ವನವಾಟು ಪೆಸಿಫಿಕ್ ಮಹಾಸಾಗರದ ಭೂಕಂಪನ ಮತ್ತು ಜ್ವಾಲಾಮುಖಿ ಚಟುವಟಿಕೆಗಳಿಗೆ ಹೆಸರಾದ ‘ರಿಂಗ್ ಆಫ್ ಫೈರ್’ ವಲಯದಲ್ಲಿದೆ. ಇಲ್ಲಿ ಭೂಫಲಕಗಳ ಚಲನೆ ಹಾಗೂ ಘರ್ಷಣೆಯಿಂದ ಆಗಾಗ ಭೂಕಂಪಗಳು ಸಂಭವಿಸುತ್ತವೆ.
ಜಿಯೋಶೇಕ್ ಸಂಸ್ಥೆಯ ಮಾಹಿತಿ ಪ್ರಕಾರ, ಕಳೆದ 30 ದಿನಗಳಲ್ಲಿ ವನವಾಟು ಪ್ರದೇಶದಲ್ಲಿ 70ಕ್ಕೂ ಹೆಚ್ಚು ಭೂಕಂಪಗಳು ದಾಖಲಾಗಿವೆ. ಅಕ್ಟೋಬರ್ 20ರಂದು ಪೋರ್ಟ್ ಓಲ್ರಿ ಸಮೀಪ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೀಗ ಮತ್ತೆ ಪ್ರಬಲ ಕಂಪನಗಳು ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.



