ಮಹಿಳಾ ನೌಕರಳಿಗೆ ಲೈಂಗಿಕ ಕಿರುಕುಳ ಆರೋಪ: ಸಾಗರ ನಗರಸಭೆ ಮೇಸ್ತ್ರಿ ನಾಗರಾಜ್ ಅಮಾನತು

ಶಿವಮೊಗ್ಗ: ಕೆಲಸದ ಸ್ಥಳದಲ್ಲಿ ಮಹಿಳಾ ನೌಕರರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಎದುರಿಸುತ್ತಿರುವ ಸಾಗರ ನಗರಸಭೆಯ ಸ್ಯಾನಿಟರಿ ಸೂಪರ್‌ವೈಸರ್ (ನೈರ್ಮಲ್ಯ ಮೇಲ್ವಿಚಾರಕ) ನಾಗರಾಜ ಎಂ. ಬಿನ್ ಮಾಣಿಕ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

​ಪ್ರಕರಣದ ಹಿನ್ನೆಲೆ:

​ಸಾಗರ ನಗರಸಭೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರಿಗೆ ನಾಗರಾಜ ಅವರು ಕಳೆದ ಕೆಲವು ಸಮಯದಿಂದ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಾ ಬಂದಿದ್ದರು ಎನ್ನಲಾಗಿದೆ. ಜೂನ್ 11ರಂದು ಈ ಕುರಿತು ನೊಂದ ಮಹಿಳೆಯು ಜಿಲ್ಲಾಧಿಕಾರಿಗಳ ಕಚೇರಿಗೆ ಕಾನೂನು ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದ್ದರು. ಈ ಬೆನ್ನಲ್ಲೇ ಪ್ರಕರಣವನ್ನು ಸಾಗರ ನಗರಸಭೆಯ ಆಂತರಿಕ ದೂರು ಸಮಿತಿಗೆ ಒಪ್ಪಿಸಲಾಗಿತ್ತು.

​ಸಮಿತಿ ಹಾಗೂ ಪೊಲೀಸರ ನಡೆ:

​ಜೂನ್ 12ರಂದು ಆಂತರಿಕ ದೂರು ಸಮಿತಿಯ ಮುಂದೆ ಹಾಜರಾಗಲು ಇಬ್ಬರಿಗೂ ಸೂಚನೆ ನೀಡಲಾಗಿತ್ತಾದರೂ, ಆರೋಪಿ ನಾಗರಾಜ ಸಮಿತಿಯ ಮುಂದೆ ಹಾಜರಾಗದೆ ಗೈರುಳಿದಿದ್ದರು. ಇದೇ ವೇಳೆ ಸಂತ್ರಸ್ತೆ ಸಮಿತಿಗೆ ಗೌಪ್ಯವಾಗಿ ಲಿಖಿತ ಹೇಳಿಕೆ ನೀಡಿದ್ದರು.

​ಇದಲ್ಲದೆ, ಸಂತ್ರಸ್ತ ಮಹಿಳೆಯು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದು, ಆರೋಪಿ ನಾಗರಾಜ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳು ಸೇರಿದಂತೆ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಎಫ್.ಐ.ಆರ್ (FIR) ದಾಖಲಾಗಿದೆ. ಪ್ರಕರಣದ ತೀವ್ರತೆ ವಿರೋಧಿಸಿ ಸೋಷಿಯಲ್ ಮೀಡಿಯಾ ಹಾಗೂ ಸಾಗರದ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದವು.

​ಅಮಾನತು ಆದೇಶ:

​ಜೂನ್ 13ರಿಂದಲೇ ಕಚೇರಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿ ತಲೆಮರೆಸಿಕೊಂಡಿರುವ ಆರೋಪಿ ಮೇಸ್ತ್ರಿ ನಾಗರಾಜ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ, ಸಾಗರ ಪೌರಾಯುಕ್ತರು ವರದಿ ನೀಡಿದ್ದರು.

​ಈ ವರದಿಯನ್ನು ಆಧರಿಸಿ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳ ಉಲ್ಲಂಘನೆಗಾಗಿ ಹಾಗೂ ಪ್ರಕರಣದ ವಿಚಾರಣೆಯನ್ನು ಬಾಕಿ ಇರಿಸಿ, ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು 1957ರ ಅನ್ವಯ ನಾಗರಾಜ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಇವರ ಲೀನ್ ಅನ್ನು ತಾತ್ಕಾಲಿಕವಾಗಿ ಶಿಕಾರಿಪುರ ಪುರಸಭೆಗೆ ವರ್ಗಾಯಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಪ್ರಧಾನ ಸಂಪಾದಕರು