ಶಿವಮೊಗ್ಗ: ಮಲೆನಾಡಿನ ಸೌಂದರ್ಯಕ್ಕೆ ಕೊನೆಯಿಲ್ಲ. ಅದರಲ್ಲೂ ಶರಾವತಿ ಹಿನ್ನೀರಿನ ಕರೂರು ಹೋಬಳಿಯ ದಟ್ಟ ಕಾಡಿನೊಳಗೆ ಪಯಣ ಬೆಳೆಸಿದರೆ, ಪ್ರಕೃತಿಯೇ ಒಂದು ಹೊಸ ಜಗತ್ತನ್ನು ನಮ್ಮ ಮುಂದೆ ತೆರೆದಿಡುತ್ತದೆ. ಸಾಗರ ತಾಲೂಕಿನ ಮುಗಿಲೆತ್ತರದ ಅಂಬಾರಗುಡ್ಡದ ತಪ್ಪಲಿನಲ್ಲಿರುವ ಸಣ್ಣದೊಂದು ಹಳ್ಳಿ ‘ಆವಿಗೆ’. ಅಮೇಜಾನ್ ಕಾಡಿನಂತೆ ಭಾಸವಾಗುವ ದಟ್ಟಡವಿ, ಪ್ರಕೃತಿಯ ನಿಗೂಢ ತಿರುವುಗಳು, ಸಣ್ಣ ಸಣ್ಣ ಸೇತುವೆಗಳು ಮತ್ತು ಅಲ್ಲೊಂದು ಇಲ್ಲೊಂದು ಕಾಣ ಸಿಗುವ ಮನೆಗಳು. ಕೊಡಚಾದ್ರಿಯ ಆಜುಬಾಜಿನಲ್ಲೇ ಕಂಗೊಳಿಸುವ ಈ ಸ್ವರ್ಗಸದೃಶ ಪರಿಸರದಲ್ಲಿ, ಕೇವಲ ನೂರರ ಆಸುಪಾಸಿನ ಜನಸಂಖ್ಯೆ ಹೊಂದಿರುವ ಈ ಪುಟ್ಟ ಗ್ರಾಮದ ಜನರ ಬದುಕಿಗೆ ಬೆಳಕಾಗಿ ನಿಂತಿರುವುದೇ ಅಲ್ಲಿನ ಏಕೈಕ ಸರ್ಕಾರಿ ಶಾಲೆ. ಏಕೈಕ ಅತಿಥಿ ಶಿಕ್ಷಕಿ. ಆ ಶಿಕ್ಷಕಿಯ ಯಶೋಗಾಥೆ ಮುಂದೆ ಓದಿ..
ಭೀತಿ ಸರಿಸಿದ ಪ್ರಕೃತಿಯ ವಿಸ್ಮಯ
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಹಾಳಸಸಿ ಶಾಲೆಯ ರಸ್ತೆಯಲ್ಲಿ ವಾಹನ ಸಾಗುತ್ತಿದ್ದರೇ, ಸುತ್ತಲಿನ ನಿಶ್ಯಬ್ದ ಮತ್ತು ಮುಗಿಲು ಮುಟ್ಟುವ ಬೆಟ್ಟಗಳು ರೋಮಾಂಚನ ಉಂಟುಮಾಡುತ್ತದೆ. ಈ ಭಾಗದಲ್ಲಿ “ಮೊನ್ನೆ ಅಷ್ಟೇ ಇಲ್ಲಿ ಹುಲಿ ಅಡ್ಡ ಬಂದಿತ್ತಂತೆ” ಎಂದಾಗ ಎದೆ ಝಲ್ಲೆಂದಿದ್ದು ಸುಳ್ಳಲ್ಲ! ಆದರೆ, ಮಲೆನಾಡಿನ ಈ ಅಡವಿಯಲ್ಲಿ ಇದೆಲ್ಲವೂ ಬದುಕಿನ ಸಹಜ ಭಾಗ. ಅಂಬಾರಗುಡ್ಡದ ಭವ್ಯತೆಯನ್ನು ಕಣ್ಣುಂಬಿಕೊಳ್ಳುತ್ತಿದ್ದಂತೆ ಭಯವೆಲ್ಲ ಮಾಯವಾಗಿ, ಮನದಲ್ಲಿ ಆನಂದ ಮೂಡುತ್ತದೆ.
ಕುಣಬಿ ಜನಾಂಗದ ಬದುಕು ಮತ್ತು ಶೈಕ್ಷಣಿಕ ಆಶಾಕಿರಣ
ಈ ಭಾಗದಲ್ಲಿ ಹೆಚ್ಚಾಗಿ ವಾಸಿಸುವವರು ‘ಕುಣಬಿ’ ಜನಾಂಗದ ಜನ. ಕೃಷಿ ಮತ್ತು ಕೂಲಿ ನಾಲಿಯನ್ನೇ ನಂಬಿ ಬದುಕುವ ಅತ್ಯಂತ ಮುಗ್ಧ ಮನಸ್ಸಿನ ಶ್ರಮಜೀವಿಗಳು. ತಾವಾಯಿತು, ತಮ್ಮ ಕಷ್ಟದ ಬದುಕಾಯಿತು ಎಂದು ಬಾಳುವ ಈ ಜನರು, ಬೆಳಗ್ಗೆ ಎದ್ದರೆ ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಕೆಲಸಕ್ಕೆ ಹೊರಡುತ್ತಾರೆ. ಇಂತಹ ದುರ್ಗಮ ಪ್ರದೇಶದ ಮಕ್ಕಳ ಶಿಕ್ಷಣಕ್ಕಾಗಿ ಸರ್ವಶಿಕ್ಷಣ ಅಭಿಯಾನದಡಿ ಆರಂಭವಾದ ಈ ಸರ್ಕಾರಿ ಶಾಲೆ, ಇಂದು ಈ ಭಾಗದ ಜನರ ಶೈಕ್ಷಣಿಕ ಬದುಕಿನ ದಾರಿದೀಪವಾಗಿದೆ.
ನಾಲ್ಕೈದು ಕಿಲೋಮೀಟರ್ ನಡೆದು ಬರುವ ಅತಿಥಿ ಶಿಕ್ಷಕಿಯ ಕಾಯಕ ನಿಷ್ಠೆ
ಪ್ರಸ್ತುತ ಈ ಶಾಲೆಯಲ್ಲಿ ಓದುತ್ತಿರುವುದು ಕೇವಲ ಐದಾರು ಮಕ್ಕಳು ಮಾತ್ರ. ಇಲ್ಲಿಗೆ ಬಂದು ಸೇವೆ ಸಲ್ಲಿಸಿ ಹೋದ ಅನೇಕ ಕಾಯಂ ಶಿಕ್ಷಕರ ನಂತರ, ಶಾಲೆಯ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುತ್ತಿರುವುದು ಒಬ್ಬರೇ ಒಬ್ಬರು ಅತಿಥಿ ಶಿಕ್ಷಕಿ ಪಾಟೀಲ್. ಪ್ರತಿದಿನ ನಾಲ್ಕೈದು ಕಿಲೋಮೀಟರ್ ದೂರದ ಕಾಡಿನ ಹಾದಿಯಲ್ಲಿ ನಡೆದುಕೊಂಡೇ ಬಂದು ಶಾಲೆ ನಡೆಸುವ ಅವರ ಕಾರ್ಯ ಅತ್ಯಂತ ಶ್ಲಾಘನೀಯ.
ಇತ್ತೀಚೆಗೆ ಶಾಲೆಗೆ ಸಾಗರ ತಾಲ್ಲೂಕು ಬಿಇಒ ಸದಾನಂದ ಸ್ವಾಮಿ.ಸಿ ನೇತೃತ್ವದ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿದಾಗ, ಯಾವುದೇ ದೂರು-ದುಮ್ಮಾನಗಳಿಲ್ಲದೆ ಸದಾ ಹಸನ್ಮುಖಿಯಾಗಿ ಸ್ವಾಗತಿಸಿದ ಆ ಶಿಕ್ಷಕಿಯ ನಡೆ ಬೆರಗುಗೊಳಿಸಿತು. ಕಠಿಣ ಪರಿಸ್ಥಿತಿಯಲ್ಲೂ ಇಲಾಖೆಯ ಮಾಹಿತಿಗಳನ್ನು ಕಾಲಕಾಲಕ್ಕೆ ಒದಗಿಸುವುದು, ಬಿಸಿಯೂಟದ ವ್ಯವಸ್ಥಿತ ನಿರ್ವಹಣೆ ಮತ್ತು ಮಕ್ಕಳಲ್ಲಿ ಉತ್ತಮ ಕಲಿಕಾ ಮಟ್ಟವನ್ನು ಕಾಯ್ದುಕೊಂಡಿರುವುದು ನಿಜಕ್ಕೂ ಆಶ್ಚರ್ಯ ತರಿಸುತ್ತದೆ. BEO ಸದಾನಂದ ಸ್ವಾಮಿ.ಸಿ ಮಕ್ಕಳೊಂದಿಗೆ ಬೆರೆತು ಈ ಪ್ರಗತಿಯನ್ನು ಕಣ್ಣಾರೆ ಕಂಡು ಶಿಕ್ಷಕಿಗೆ ಧೈರ್ಯ ತುಂಬಿ ಮಾರ್ಗದರ್ಶನ ನೀಡಿರುವುದು ವಿಶೇಷವಾಗಿತ್ತು.
ಬೆಳಗಾವಿಯಿಂದ ಮಲೆನಾಡಿನ ಕಾಡಿನವರೆಗೆ: ಒಂದು ಅಪರೂಪದ ಸ್ಪೂರ್ತಿ
ಈ ಶಾಲೆಯ ಅತಿಥಿ ಶಿಕ್ಷಕಿ ಪಾಟೀಲ್ ಅವರು ಮೂಲತಃ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯವರು! ದೂರದ ಊರಿನಿಂದ ಬಂದು, ಮಲೆನಾಡಿನ ಈ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಅತ್ಯಂತ ಸಂತಸದಿಂದ ಹೇಳಿದ ನುಡಿ ಹೀಗಿದೆ:
“ಇಂತಹ ಪುಣ್ಯದ ಕೆಲಸ ಸಿಕ್ಕಿದ್ದು ನನ್ನ ಸುದೈವ. ಈ ಭಾಗದ ಜನರು ನನ್ನನ್ನು ತಮ್ಮ ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ಸಿ.ಆರ್.ಪಿ ಚಂದ್ರಪ್ಪ, ಪ್ರಸನ್ನ ಹಾಗೂ ಇ.ಸಿ.ಒ ದಿನೇಶ್ ಅವರ ನಿರಂತರ ಮಾರ್ಗದರ್ಶನ ನನಗೆ ಆತ್ಮಸ್ಥೈರ್ಯ ನೀಡಿದೆ.”
ಅವರ ಈ ಮಾತುಗಳು ಇಂದಿನ ಇಡೀ ಶಿಕ್ಷಕ ಸಮುದಾಯಕ್ಕೇ ಒಂದು ದೊಡ್ಡ ಸ್ಪೂರ್ತಿ. ಯಾವುದೇ ಸೌಲಭ್ಯಗಳ ಕೊರತೆಯ ನೆಪ ಹೇಳದೆ, ಕರ್ತವ್ಯವನ್ನೇ ದೇವರೆಂದು ಭಾವಿಸಿ ನಗುತ್ತಾ ದುಡಿಯುವ ಅತಿಥಿ ಶಿಕ್ಷಕಿ ಪಾಟೀಲ್ ಅವರ ಕಾರ್ಯ ನಿಜಕ್ಕೂ ಅಭಿನಂದನೀಯ.
ಸಾಗರ ತಾಲೂಕಿನ ಅಂಬಾರಗುಡ್ಡದ ತಪ್ಪಲಿನ ‘ಆವಿಗೆ’ ಸರ್ಕಾರಿ ಶಾಲೆ ಕೇವಲ ಒಂದು ಕಟ್ಟಡವಲ್ಲ; ಅದು ಅಕ್ಷರ ಮತ್ತು ಮಾನವೀಯತೆಯ ದೇವಸ್ಥಾನ. ಕಠಿಣ ಪರಿಸ್ಥಿತಿಯಲ್ಲೂ ಜ್ಞಾನದ ಜ್ಯೋತಿ ಉರಿಸುತ್ತಿರುವ ಈ ಶಾಲೆಗೆ ಮತ್ತು ಶ್ರಮಿಸುತ್ತಿರುವ ಕಾಯಕ ಯೋಗಿಗೆ ಅತಿಥಿ ಶಿಕ್ಷಕಿ ಪಾಟೀಲ್ ಅವರ ಕಾರ್ಯ ನಿಜಕ್ಕೂ ಅಭಿನಂದನಾರ್ಹ, ಶ್ಲಾಘನೀಯವೇ ಸರಿ.




