ಬೆಂಗಳೂರು: ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾರತದ ನೈಜ ಬದುಕು ಹಾಗೂ ಕೃಷಿ ಸಂಸ್ಕೃತಿಯ ಪ್ರಾಯೋಗಿಕ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಗ್ರಾಮಾನುಭವ’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲು ಅಧಿಕೃತ ಆದೇಶ ಹೊರಡಿಸಿದೆ.
ಯೋಜನೆಯ ರೂಪುರೇಷೆ ಮತ್ತು ಉದ್ದೇಶ
ಈ ಯೋಜನೆಯಡಿ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯ ನಗರ ಪ್ರದೇಶಗಳಲ್ಲಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 8, 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳನ್ನು ಹಳ್ಳಿಗಳಿಗೆ ಕರೆದೊಯ್ಯಲಾಗುತ್ತದೆ. ವಿದ್ಯಾರ್ಥಿಗಳು ಒಂದು ರಾತ್ರಿ ಹಾಗೂ ಎರಡು ದಿನಗಳ ಕಾಲ ಗ್ರಾಮಗಳಲ್ಲಿ ವಾಸ್ತವ್ಯ ಹೂಡಲಿದ್ದು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಜಾನಪದ ಕಲೆ ಮತ್ತು ಸಂಸ್ಕೃತಿಯ ನೇರ ಅನುಭವ ಪಡೆಯಲಿದ್ದಾರೆ. ‘ಎಕ್ಸ್‌ಪೋಶರ್ ವಿಸಿಟ್ ಫ್ರೇಮ್‌ವರ್ಕ್’ ಅಡಿಯಲ್ಲಿ ರೂಪಿಸಲಾಗಿರುವ ಈ ಕಾರ್ಯಕ್ರಮವು ಪ್ರತಿ ಶೈಕ್ಷಣಿಕ ಸಾಲಿನ ಸೆಪ್ಟೆಂಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ನಡೆಯಲಿದ್ದು, ಭೇಟಿಯ ನಂತರ ಜನವರಿ ಅಥವಾ ಫೆಬ್ರವರಿಯಲ್ಲಿ ಶಾಲಾ ಮಟ್ಟದ ಸಂವಹನ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ಮೊದಲ ಹಂತದಲ್ಲಿ ₹2.46 ಕೋಟಿ ವೆಚ್ಚ
ಆರಂಭಿಕವಾಗಿ ರಾಜ್ಯದ ಒಟ್ಟು 160 ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಸುಮಾರು ₹2.46 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಗರ ಪ್ರದೇಶದ ಎಲ್ಲಾ ಪಿಎಂ ಶ್ರೀ (PM SHRI) ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲೂ (KPS) ಈ ಉಪಕ್ರಮ ಕಡ್ಡಾಯವಾಗಿ ಜಾರಿಗೆ ಬರಲಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ‘ಮೊದಲ 100 ದಿನಗಳ’ ಕಾರ್ಯಸೂಚಿಯ ಭಾಗವಾಗಿ ಈ ಯೋಜನೆಗೆ ಚಾಲನೆ ನೀಡಿದೆ.
“ನಮ್ಮ ದೇಶವೀಗ ‘ಗ್ರಾಮೀಣ ಭಾರತ’ ಹಾಗೂ ‘ನಗರ ಭಾರತ’ ಎಂದು ಎರಡು ಭಾಗಗಳಾಗಿ ವಿಂಗಡಣೆಯಾಗುತ್ತಿದೆ. ಇವೆರಡರ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ಭಾಗದ ವಿದ್ಯಾರ್ಥಿಗಳನ್ನು ಗ್ರಾಮೀಣ ಭಾರತದ ಬೇರುಗಳೊಂದಿಗೆ ಮರುಸಂಯೋಜಿಸಿ ಈ ಕಂದಕವನ್ನು ಮುಚ್ಚುವುದೇ ‘ಗ್ರಾಮಾನುಭವ’ ಯೋಜನೆಯ ಮೂಲ ಆಶಯ.”
– ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು




