ಭಾರತ–ಈಜಿಪ್ಟ್ ಕಡಲ ಸಹಕಾರಕ್ಕೆ ಮತ್ತಷ್ಟು ಬಲ: ಅಲೆಕ್ಸಾಂಡ್ರಿಯಾದಲ್ಲಿ INS ತ್ರಿಶೂಲ್ ನೌಕಾ ತಾಲೀಮು

ಅಲೆಕ್ಸಾಂಡ್ರಿಯಾ: ಭಾರತೀಯ ನೌಕಾಪಡೆಯ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆ ಐಎನ್ಎಸ್ ತ್ರಿಶೂಲ್ ಸೆ.14ರಿಂದ 17ರವರೆಗೆ ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ಬಂದರಿಗೆ ಭೇಟಿ ನೀಡಿದ್ದು, ಭಾರತ–ಈಜಿಪ್ಟ್ ನಡುವಿನ ಕಡಲ ಸಹಕಾರಕ್ಕೆ ಮತ್ತಷ್ಟು ಬಲ ನೀಡಿದೆ.

ಅಲೆಕ್ಸಾಂಡ್ರಿಯಾ ಬಂದರಿಗೆ ಆಗಮಿಸಿದ ಐಎನ್ಎಸ್ ತ್ರಿಶೂಲ್‌ಗೆ ಈಜಿಪ್ಟ್ ನೌಕಾಪಡೆಯ ಅಲ್ ಖದೀರ್ ಹಡಗು ಆತ್ಮೀಯ ಸ್ವಾಗತ ನೀಡಿತು. ಭೇಟಿ ವೇಳೆ ಯುದ್ಧನೌಕೆಯ ಕಮಾಂಡಿಂಗ್ ಅಧಿಕಾರಿ ಹಾಗೂ ಸಿಬ್ಬಂದಿ ಚಾಟ್ಬಿ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಎರಡು ವಿಶ್ವಯುದ್ಧಗಳಲ್ಲಿ ಪ್ರಾಣ ಕಳೆದುಕೊಂಡ ಯೋಧರ ಸ್ಮರಣಾರ್ಥ ಇರುವ ಈ ಸ್ಮಾರಕದಲ್ಲಿ 12 ಸಮಾಧಿಗಳಿದ್ದು, ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ ಹಡಗುಗಳಲ್ಲಿ ಮೃತಪಟ್ಟ 19 ಭಾರತೀಯ ಯೋಧರ ಹೆಸರುಗಳೂ ದಾಖಲಾಗಿವೆ.

ಈಜಿಪ್ಟ್‌ನಲ್ಲಿರುವ ಭಾರತದ ರಾಯಭಾರಿ ಸುರೇಶ್ ಕೆ. ರೆಡ್ಡಿ ಅವರು ಐಎನ್ಎಸ್ ತ್ರಿಶೂಲ್‌ಗೆ ಭೇಟಿ ನೀಡಿ ನೌಕಾಪಡೆಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಈ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಉಪಸ್ಥಿತಿಯ ಮಹತ್ವವನ್ನು ಅವರು ಒತ್ತಿ ಹೇಳಿದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಭೇಟಿಯ ಪ್ರಮುಖ ಭಾಗವಾಗಿ ಐಎನ್ಎಸ್ ತ್ರಿಶೂಲ್ ಹಾಗೂ ಈಜಿಪ್ಟ್ ನೌಕಾಪಡೆಯ ENS ಬರ್ನೀಸ್ ನಡುವೆ ಪ್ಯಾಸೇಜ್ ಎಕ್ಸರ್ಸೈಸ್ (PASSEX) ನಡೆಯಿತು.

ಸಮುದ್ರದಲ್ಲಿ ಮರುಪೂರಣಕ್ಕೆ ಸಂಬಂಧಿಸಿದ ಸಂಘಟಿತ ಚಲನವಲನ, ಸಂವಹನ ಹಾಗೂ ವಿವಿಧ ಕಾರ್ಯಾಚರಣಾ ಅಭ್ಯಾಸಗಳನ್ನು ಒಳಗೊಂಡಿದ್ದ ಈ ವ್ಯಾಯಾಮವು ಎರಡೂ ನೌಕಾಪಡೆಗಳ ಸಿಬ್ಬಂದಿಗೆ ಅನುಭವ ಹಂಚಿಕೊಳ್ಳಲು ಮತ್ತು ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸಿಕೊಳ್ಳಲು ನೆರವಾಯಿತು.

ಬಂದರು ಭೇಟಿ ಹಾಗೂ ಜಂಟಿ ನೌಕಾ ವ್ಯಾಯಾಮವು ಭಾರತ–ಈಜಿಪ್ಟ್ ನಡುವಿನ ದೀರ್ಘಕಾಲದ ಕಡಲ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಕಡಲ ಭದ್ರತೆ ಮತ್ತು ಸಹಕಾರ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವಿನ ಸಮನ್ವಯವನ್ನು ವೃದ್ಧಿಸುವ ಉದ್ದೇಶ ಹೊಂದಿದೆ.