ಮುಂಬೈ: ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ರಸ್ತೆ ಹಾಗೂ ರೈಲು ಹಳಿಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿದೆ. ನಲಸೋಪಾರ ರೈಲು ನಿಲ್ದಾಣದ ಪೂರ್ವ ಭಾಗ ಜಲಾವೃತಗೊಂಡಿದ್ದು, ಪ್ರಯಾಣಿಕರು ನೀರಿನಲ್ಲೇ ನಡೆದು ಸಾಗುವಂತಾಗಿದೆ. ವಸಾಯಿ-ವಿರಾರ್ನ ಸೆಂಟರ್ ಪಾರ್ಕ್, ತುಲಿಂಜ್ ಸೇತುವೆ ಸುತ್ತಮುತ್ತಲಿನ ರಸ್ತೆಗಳಲ್ಲೂ ನೀರು ನಿಂತಿದೆ. ಕುರ್ಲಾ ರೈಲು ನಿಲ್ದಾಣದ ಹಳಿಗಳ ಮೇಲೂ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದೆ.
ಇನ್ನೊಂದೆಡೆ,ಕಡಿಮೆ ಒತ್ತಡದ ಪ್ರದೇಶದ ಪರಿಣಾಮ ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪಲ್ನಾಡು ಜಿಲ್ಲೆಯ ಪೆಟ್ಲುರಿವಾರಿಪಾಲೆಂ ಮತ್ತು ಲಕ್ಷ್ಮೀಪುರಂ ಗ್ರಾಮಗಳಲ್ಲಿ ಗುಡುಗಿನ ಶಬ್ದದ ಬಳಿಕ ನಾಗಮ್ಮ (63) ಮತ್ತು ಮೇಕಲ ವೆಂಕಯ್ಯಮ್ಮ (60) ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ವಿಶಾಖಪಟ್ಟಣಂ, ಗಜುವಾಕ ಹಾಗೂ ಪೂರ್ವ ಗೋದಾವರಿ ಭಾಗಗಳಲ್ಲೂ ಭಾರಿ ಮಳೆಯಾಗಿದ್ದು, ನಿಡದವೋಲು ಬಸ್ ನಿಲ್ದಾಣ ಜಲಾವೃತಗೊಂಡಿದೆ.
ತಮಿಳುನಾಡಿನ ಪೆರಂಬಲೂರು, ವೆಲ್ಲೂರು, ವಿರುದುನಗರ, ದಿಂಡಿಗಲ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಪೆರ್ನಾಂಬಟ್ನಲ್ಲಿ ರಾಜ್ಯ ಹೆದ್ದಾರಿ ಜಲಾವೃತಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸೆ.15–16ರಂದು ನೀಲಗಿರಿ ಹಾಗೂ ಸೆ.16ರಂದು ಕೊಯಮತ್ತೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.



