ಉತ್ತರ ಕನ್ನಡದಲ್ಲಿ ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆಯಾಗಿ 18 ಕಾರ್ಮಿಕರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಉತ್ತರಕನ್ನಡ: ಜಿಲ್ಲೆಯಲ್ಲಿ ಕಾರ್ಖಾನೆಯೊಂದರಲ್ಲಿ ರಾಸಾಯನಿಕ ಸೋರಿಕೆಯಾದ ಪರಿಣಾಮ 18 ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಂತ ಘಟನೆ ಉತ್ತರ ಕನ್ನಡದ ಬಿಣಗಾ ಬಳಿಯಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಬಳಿಯ ಆದಿತ್ಯ ಬಿರ್ಲಾ ಗ್ರೂಪ್ ನ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಇಂದು ರಾಸಾಯನಿಕ ಸೋರಿಕೆಯಾಗಿದೆ. ಈ ಘಟನೆಯಿಂದಾಗಿ 18 ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನೂ ಇಷ್ಟು ಘೋರ ದುರಂತ ಸಂಭವಿಸಿದರೂ ಕಾರ್ಖಾನೆ ಮಾತ್ರ ಕಾರ್ಮಿಕರನ್ನು ಹೊರ ಕಳಿಸಿ ರಜೆ ಘೋಷಿಸಿ ಮತ್ತಷ್ಟು ಕಾರ್ಮಿಕರು ಅಸ್ವಸ್ಥಗೊಳ್ಳೋ ಮುನ್ನ ಎಚ್ಚರಿಕೆ ವಹಿಸುವಂತ ಕ್ರಮವನ್ನು ವಹಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಕಾರ್ಖಾನೆಯ ಮುಂದೆ ಕೆಲ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆಯನ್ನು ಕೂಡ ನಡೆಸಿರುವುದಾಗಿ ತಿಳಿದು ಬಂದಿದೆ.

ಕೆಲ ದಿನಗಳ ಹಿಂದೆ ಕ್ಲೋರಿನ್ ಸೋರಿಕೆಯಾಗಿ ಕಾಸ್ಟಿಕ್ ಸೋಡಾ ಉತ್ಪಾದಿಸುವ ಗ್ರಾಸಿಂ ಇಂಡಸ್ಟ್ರೀಸ್ ನಲ್ಲಿ ಬಿಣಗಾ ಗ್ರಾಮದ ನಿವಾಸಿ ನಾಗರಾಜ್ ಎಂಬವರು ಮೃತಪಟ್ಟಿದ್ದರು. ಸದ್ಯ ಡಿವೈಎಸ್ಪಿ ಗಿರೀಶ್ ಹಾಗೂ ಪೊಲೀಸರ ತಂಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದೆ. ಈ ವೇಳೆ ಡಿವೈಎಸ್ಪಿ ಗಿರೀಶ್ ಕಾರ್ಮಿಕರಿಂದ ಘಟನೆ ಕುರಿತು ಮಾಹಿತಿ ಪಡೆದರು. ಈ ಘಟನೆ ಸಂಬಂಧ ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.