ತೆರೆದ ವಾಹನದಲ್ಲಿ RCB ಆಟಗಾರರ ಮೆರವಣಿಗೆ ಇಲ್ಲ, ವಿಧಾನಸೌಧದ ಮೆಟ್ಟಿಲಿನ ಮೇಲೆ ಸನ್ಮಾನ: ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು : 18 ವರ್ಷಗಳ ನಂತರ ಐಪಿಎಲ್ ಚಾಂಪಿಯನ್‌ಶಿಪ್ ಆಗಿರುವ ಆರ್‌ಸಿಬಿ ತಂಡಕ್ಕೆ ನನ್ನ ಅಭಿನಂದನೆಗಳು. ವಿಶೇಷವಾಗಿ ವಿರಾಟ್ ಕೊಹ್ಲಿ ಅವರು ದೇಶಕ್ಕೆ ಮಾತ್ರವಲ್ಲದೇ, ಇಡೀ ವಿಶ್ವಕ್ಕೆ ಮಾದರಿ‌ ಕ್ರೀಡಾಪಟುವಾಗಿ ಹೊರ ಹೊಮ್ಮಿರುವುದು ಸಂತೋಷದಾಯಕ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ತಂಡ ಗೆದ್ದಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಆಡಿದ ಮಾತುಗಳು ನಿಜಕ್ಕು ಹೆಮ್ಮೆ ಎನಿಸುತ್ತದೆ. 18 ವರ್ಷಗಳಿಂದ ಸತತ ಆರ‌ಸಿಬಿ ತಂಡಕ್ಕೆ ನಿಷ್ಠೆಯಾಗಿ ಆಡಿರುವುದು ಎಲ್ಲ‌ ಕ್ರೀಡಾಪಟುಗಳಿಗೆ ಉತ್ತಮ ಸಂದೇಶ ಕೊಡುತ್ತದೆ‌. ಬೆಂಗಳೂರಿನ ಬಗ್ಗೆ ಭಾವನಾತ್ಮಕ ನಂಟಿನ ಬಗ್ಗೆ ಅವರು ಹೇಳಿರುವುದು ಸಂತೋಷ ತಂದಿದೆ‌ ಎಂದರು.

ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ತಂಡಕ್ಕೆ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುವುದು.

ಎಲ್ಲ ಆಟಗಾರರು ಬಸ್‌ನಲ್ಲಿ ಬರುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಬಸ್‌ನಲ್ಲೇ ವಾಪಸ್ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುತ್ತಾರೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ‌ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಅಭಿನಂದಿಸುತ್ತಾರೆ. ಆರ್‌ಸಿಬಿ ತಂಡದ ಪರವಾಗಿ ಇಬ್ಬರು ಮಾತನಾಡಲಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಕಾರ್ಯಕ್ರಮಗಳಿಲ್ಲ ಎಂದು ಹೇಳಿದರು.

ಭದ್ರತಾ ದೃಷ್ಟಿಯಿಂದ ಆಟಗಾರರು ತೆರೆದ ವಾಹನದಲ್ಲಿ ಸ್ಟೇಡಿಯಂಗೆ ಹೋಗುತ್ತಿಲ್ಲ. ಕೆಎಸ್‌ಸಿಎ ವತಿಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಿಕೊಳ್ಳಲಿದ್ದಾರೆ. ಅಗತ್ಯ ಪೊಲೀಸ್ ಭದ್ರತೆ, ಟ್ರಾಫಿಕ್ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.