ಬೆಂಗಳೂರು: ‘ಯಾರದ್ದೋ ಸಾಲಕ್ಕೆ ಇನ್ಯಾರದ್ದೋ ಆಸ್ತಿ ಹರಾಜು’ ವಿವಾದಕ್ಕೆ ಸಿಲುಕಿರುವ ಪೊಳಲಿ ಸೇವಾ ಸಹಕಾರ ಸಂಘ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ಸಕ್ಷಮ ಪ್ರಾಧಿಕಾರಕ್ಕೆ ವರ್ಗಾಯಿಸಿದೆ. ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಏಕಸದಸ್ಯ ಪೀಠವು ಅರ್ಜಿದಾರರಿಗೆ ಸಂಪೂರ್ಣ ಲಿಬರ್ಟಿ ನೀಡಿ ಆದೇಶಿಸಿದೆ.
ಪೊಳಲಿ ಸೇವಾ ಸಹಕಾರ ಸಂಘವು ಸುರೇಂದ್ರ ಎಂಬವರಿಗೆ ಸಾಲ ನೀಡಿದ್ದು, ಅ ಸಾಲದ ಬಾಕಿ ಹಣವನ್ನು ಜಪ್ತಿ ಮಾಡುವ ಸಂಬಂಧ ಸಾಲಗಾರನ ತಂದೆ ಗೋಪಾಲರವರ ಜಮೀನನ್ನು ಹರಾಜು ಮಾಡಲು ಅಧಿಕಾರಿಗಳು ಮುಂದಾಗಿದ್ದರು. 2017ರಲ್ಲಿ ಗೋಪಾಲ ಅವರ ಪುತ್ರ ಸುರೇಂದ್ರ ಎಂಬಾತ ಪೊಳಲಿ ಸೇವಾ ಸಹಕಾರ ಸಂಘದಿಂದ ಸಾಲ ಪಡೆದಿದ್ದ. ಆ ಅಪೈಕಿ ಭಾಗಶಃ ಸಾಲ ಸಂದಾಯವಾಗಿದ್ದರೂ ಬಾಕಿ ಹಣ ಬಾಕಿ ಉಳಿಸಿಕೊಂಡಿದ್ದರಿಂದ ಮಂಗಳೂರಿನ ಸಹಕಾರ ಸಂಘಗಳ ಸಹಾಯಕ ಆಯುಕ್ತರ ನ್ಯಾಯಾಲಯವು ಸಾಲಗಾರ ಹಾಗೂ ಜಾಮೀನುದಾರರ ವಿರುದ್ಧ ಆದೇಶ ಪ್ರಕಟಿಸಿತ್ತು. ಅದರಂತೆ ಜ.9ರಂದು ನಡೆಯಬೇಕಿದ್ದ ಹರಾಜು ನೋಟೀಸಿನಲ್ಲಿ ಸಾಲವನ್ನೇ ಪಡೆಯದ ಗೋಪಾಲ ರವರ ಅಸ್ತಿಯನ್ನು ಹರಾಜು ಮಾಡುವ ಉಲ್ಲೇಖ ಇದ್ದುದನ್ನು ಕಂಡು ಆ ಮನೆಯವರು ಶಾಕ್ ಆದರು. ತಮ್ಮ ಅಸ್ತಿ ದಾಖಲೆ ತಮ್ಮ ಬಳಿಯೇ ಇದೆ. ತಮ್ಮ ಆಸ್ತಿಯನ್ನು ಯಾವುದೇ ಬ್ಯಾಂಕಿಗೆ ಅಡಮಾನ ಇಟ್ಟಿಲ್ಲ, ಆದರೂ ಅಸ್ತಿ ಹರಾಜಿನ ನೋಟೀಸ್ ಬಂದಿರುವುದರಿಂದ ಗಲಿಬಿಲಿಗೊಂಡ ಗೋಪಾಲ ಅವರ ಪುತ್ರರಾದ ಜಯಪ್ರಕಾಶ್ ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಹಕಾರ ಇಲಾಖೆಯ ಯಡವಟ್ಟು?
ಈ ಪ್ರಕರಣದಲ್ಲಿ ಸಾಲಗಾರರ ಹಾಗೂ ಜಮೀನುದಾರರ ವಿರುದ್ಧ ವಸೂಲಾತಿ ಕ್ರಮ ನಡೆಯಬಹುದಾದರೂ ಸೊಸೈಟಿಯ ಜೊತೆ ಶಾಮೀಲಾಗಿ ಸಹಕಾರ ಇಲಾಖೆಯ ಅಧಿಕಾರಿಗಳು ನಿಯಮಬಾಹಿರ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸುರೇಂದ್ರ ಎಂಬಾತನಿಗೆ ವೈಯಕ್ತಿಕ ಸಾಲ ನೀಡಿರುವ ಸಹಕಾರ ಸಂಘ ಬಾಕಿ ವಸೂಲಿಗಾಗಿ ಸಾಲಗಾರನ ತಂದೆ ಗೋಪಾಲ ರವರ ಆಸ್ತಿ ಜಪ್ತಿಗೆ ಕೋರಿದೆ. ಗೋಪಾಲ ಭಂಡಾರಿಯವರು ಸದರಿ ಸಹಕಾರ ಸಂಘದಿಂದ ಸಾಲವನ್ನೂ ಪಡೆದಿಲ್ಲ, ಜಾಮೀನುದಾರರಾಗಿಯೂ ಗುರುತಾಗಿಲ್ಲ. ಆದರೂ ಅವರು GPA ಮಾಡಿಕೊಟ್ಟಿದ್ದಾರೆ ಎಂದು ಸೊಸೈಟಿ ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಸೊಸೈಟಿ ಮುಂದಿಟ್ಟಿರುವ GPA ಯಲ್ಲಿ ಗೋಪಾಲ ಅವರ ಸಹಿ ಇಲ್ಲ. ಆಸ್ತಿಯ ಮೂಲ ದಾಖಲೆಯಲ್ಲಿ ಅವರ ಸಹಿ ಇದೆ. ಇದನ್ನು ಗಮನಿಸಿದಾಗ ನಕಲಿ GPA ಎಂಬ ಅನುಮಾನ ಉಂಟಾಯಿತು.
ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಆರೋಪ:
GPA ಮುಖಾಂತರ ಅಡಮಾನ ಸಾಲ ನೀಡಿದ್ದಲ್ಲಿ GPA ಬರೆದುಕೊಟ್ಟವರ ಹೆಸರಲ್ಲೇ ವ್ಯವಹಾರ ನಡೆಯಬೇಕು ಎಂದು ‘ಸೂರಜ್ ಲ್ಯಾಂಪ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. GPA ಮೂಲಕ ಮಾಲೀಕತ್ವ ಬದಲಾಗದು. ಮಾತ್ರವಲ್ಲ GPA ನೋಂದಾಯಿಸಲ್ಪಡದಿದ್ದಲ್ಲಿ ಅದನ್ನು ಆಧರಿಸಿದ ವ್ಯವಹಾರ ಅಸಿಂಧು ಎಂದು ಸುಪ್ರೀಂ ಕೋರ್ಟ್ 2012ರಲ್ಲೇ ಹೇಳಿದೆ. ಆದರೂ ಪೊಳಲಿ ಸೊಸೈಟಿ ಯಾರದ್ದೋ ಸಾಲಕ್ಕೆ ಇನ್ಯಾರದ್ದೋ ಆಸ್ತಿಯನ್ನು ಗುರುತಿಸಿದೆ. ಸಹಕಾರ ಇಲಾಖೆಯ ಸಹಾಯಕ ನಿಬಂಧಕರ ಕಚೇರಿ ಅಧಿಕಾರಿಗಳು ಕೂಡಾ ದಾಖಲೆಗಳನ್ನು ಪರಿಶೀಲಿಸದೆ ಏಕಪಕ್ಷೀಯವಾಗಿ, ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಅಸ್ತಿ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟಿನಲ್ಲಿ ನಡೆದದ್ದೇನು?
ವಿವಾದಿತ ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಅಗತ್ಯ ದಾಖಲೆಯನ್ನು ಒದಗಿಸಲು ಅರ್ಜಿದಾರರಿಗೆ ಸೂಚಿಸಿ ಮಂಗಳವಾರಕ್ಕೆ ವಿಚಾರಣೆ ನಿಗದಿಪಡಿಸಿತ್ತು. ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ವಕೀಲರು ಖುದ್ದು ಹಾಜರಿರಲಿಲ್ಲ. ಸರ್ಕಾರದ ಪರ ವಕೀಲರು, ಇದು ಸಹಕಾರ ಸಂಘಗಳ ನ್ಯಾಯಾಲಯದ ಪ್ರಕ್ರಿಯೆ ಆಗಿರುವುದರಿಂದ ಹೈಕೋರ್ಟ್ ಬದಲಿಗೆ ಸಕ್ಷಮ ಪ್ರಾಧಿಕಾರದ ಮುಂದೆ ವಿಚಾರಣೆ ನಡೆಯುವುದು ಸೂಕ್ತ ಎಂದು ಅಭಿಪ್ರಾಯ ಮಂಡಿಸಿದರು. ಆದರೆ, ಅರ್ಜಿದಾರರು ಸಾಲಗಾರರೂ ಅಲ್ಲ, ಜಾಮೀನುದಾರರೂ ಅಲ್ಲ, ಹೀಗಿರುವ ಸಕ್ಷಮ ಪ್ರಾಧಿಕಾರದಲ್ಲಿ ಅರ್ಹತೆಯ ಮಾನದಂಡ ಪರಿಗಣಿಸಬೇಕಾಗುತ್ತದೆ ಎಂದು ವಕೀಲ ನವೀನ ರವರು ವೀಡಿಯೊ ಕಾನ್ಫರೆನ್ಸ್ ಮೂಲಕ ಗಮನಸೆಳೆದರು.
ಈ ವಿಚಾರದಲ್ಲಿ ಅರ್ಜಿದಾರರಿಗೆ ಹೈಕೋರ್ಟ್ ಸಂಪೂರ್ಣ ಲಿಬರ್ಟಿ ನೀಡುತ್ತಿದೆ. ಸಕ್ಷಮ ಪ್ರಾಧಿಕಾರದಲ್ಲಿ ವಿಚಾರಣೆ ನಡೆಯುವುದು ಸೂಕ್ತ ಎಂದು ನ್ಯಾಯಮೂರ್ತಿ ಇಂದ್ರೇಶ್ ಆದೇಶಿಸಿ ಅರ್ಜಿಯನ್ನು ಇತ್ಯರ್ಥಗೊಳಿಸಿದರು.




