KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್: ವಾಟ್ಸಾಪ್ ಮೆಸೇಜ್ ಕಳುಹಿಸಿ, ಟಿಕೆಟ್ ಪಡೆಯಿರಿ

ಬೆಂಗಳೂರು: ಸರ್ಕಾರಿ ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಇನ್ನು ಮುಂದೆ ಕೇವಲ ಒಂದು ವಾಟ್ಸಾಪ್ (WhatsApp) ಸಂದೇಶದ ಮೂಲಕವೇ ಕ್ಷಣಾರ್ಧದಲ್ಲಿ ಬಸ್ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಆರಂಭಿಸಿವೆ. ಕೆಎಸ್‌ಆರ್‌ಟಿಸಿ (KSRTC), ವಾಯವ್ಯ ಸಾರಿಗೆ (NWKRTC) ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ (KKRTC) ಸಂಸ್ಥೆಗಳ ಬಸ್‌ಗಳಿಗೆ ಈ ಸೇವೆ ಲಭ್ಯವಿದ್ದು, ಪ್ರಯಾಣಿಕರಿಗೆ ಸರಳ, ತ್ವರಿತ ಹಾಗೂ ನಂಬಿಕಾರ್ಹ ಪ್ರಯಾಣದ ಅನುಭವವನ್ನು ಒದಗಿಸಲಿದೆ.

ಟಿಕೆಟ್ ಪಡೆಯುವ ಹಂತಗಳು

ಪ್ರಯಾಣಿಕರು ಯಾವುದೇ ಪ್ರತ್ಯೇಕ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯವಿಲ್ಲದೆ, ಅಧಿಕೃತ ವಾಟ್ಸಾಪ್ ಮೊಬೈಲ್ ಸಂಖ್ಯೆ +91 6364940880 ಗೆ ಸಂದೇಶ ಕಳುಹಿಸುವ ಮೂಲಕ ದಿನದ 24 ಗಂಟೆಯೂ ಟಿಕೆಟ್ ಪಡೆಯಬಹುದು. ವಾಟ್ಸಾಪ್ ಚಾಟ್‌ಬಾಟ್‌ನಲ್ಲಿ ಹೊರಡುವ ಊರು, ತಲುಪಬೇಕಾದ ಸ್ಥಳ ಹಾಗೂ ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಿ, ಲಭ್ಯವಿರುವ ಸೂಕ್ತ ಬಸ್ ಅನ್ನು ಗುರುತಿಸಬೇಕು. ನಂತರ ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡಿ ಆನ್‌ಲೈನ್ ಮೂಲಕ ಹಣ ಪಾವತಿಸಿದ ತಕ್ಷಣ, ವಾಟ್ಸಾಪ್ ಹಾಗೂ ಇ-ಮೇಲ್‌ಗೆ ಅಧಿಕೃತ ಇ-ಟಿಕೆಟ್ ರವಾನೆಯಾಗಲಿದೆ.

ಡಿಜಿಟಲ್ ಪಾವತಿ ಮತ್ತು ರದ್ದತಿ ಸೌಲಭ್ಯ

ಟಿಕೆಟ್ ದರ ಪಾವತಿಸಲು ಯುಪಿಐ (UPI), ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ವಿವಿಧ ಜನಪ್ರಿಯ ಆನ್‌ಲೈನ್ ಪಾವತಿ ವಿಧಾನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಪ್ರಯಾಣ ಅನಿವಾರ್ಯವಾಗಿ ರದ್ದಾದರೆ, ಅದೇ ವಾಟ್ಸಾಪ್ ಚಾಟ್‌ನಲ್ಲಿ “Ticket Cancellation” ಆಯ್ಕೆಯನ್ನು ಕ್ಲಿಕ್ ಮಾಡಿ ಪಿಎನ್‌ಆರ್ (PNR) ಮತ್ತು ವಹಿವಾಟು ಪಾಸ್‌ವರ್ಡ್ ನಮೂದಿಸುವ ಮೂಲಕ ಟಿಕೆಟ್ ರದ್ದುಪಡಿಸಬಹುದು. ರದ್ದತಿಯ ದೃಢೀಕರಣದ ಜೊತೆಗೆ ಹಣವು ನಿಯಮಾನುಸಾರ ನೇರವಾಗಿ ಮೂಲ ಖಾತೆಗೆ ಜಮೆಯಾಗಲಿದೆ.

ಏಕೀಕೃತ ಸಾರಿಗೆ ವ್ಯವಸ್ಥೆಗೆ ನಾಂದಿ

ರಾಜ್ಯದಲ್ಲಿ ಭವಿಷ್ಯದ ಸಮಗ್ರ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಉದ್ದೇಶದಿಂದ ‘ಒಂದು ಕರ್ನಾಟಕ ಮೊಬಿಲಿಟಿ ಆ್ಯಪ್’ ಅಡಿಯಲ್ಲಿ ಬಸ್, ಮೆಟ್ರೋ, ಟ್ಯಾಕ್ಸಿ ಹಾಗೂ ಕಿರು ಮೊಬಿಲಿಟಿ ಸೇವೆಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ವಾಟ್ಸಾಪ್ ಉಪಕ್ರಮವು ಮಹತ್ವದ ಹೆಜ್ಜೆಯಾಗಿದೆ. ಟಿಕೆಟ್ ಬುಕಿಂಗ್ ಕುರಿತ ಯಾವುದೇ ಸಂದೇಹ ಅಥವಾ ತಾಂತ್ರಿಕ ಸಹಾಯಕ್ಕಾಗಿ ಪ್ರಯಾಣಿಕರು 24 ಗಂಟೆಗಳ ಸಹಾಯವಾಣಿ 080-26252625 ಅಥವಾ ಬೆಳಗ್ಗೆಯಿಂದ ರಾತ್ರಿಯವರೆಗೆ ಲಭ್ಯವಿರುವ ಮೊಬೈಲ್ ಸಂಖ್ಯೆಗಳಾದ +91 77609 90034 / +91 77609 90035 ಅನ್ನು ಸಂಪರ್ಕಿಸಬಹುದಾಗಿದೆ