ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಮಾಲ್ವೆ ಗ್ರಾಮದಲ್ಲಿ ಅರಣ್ಯ ಇಲಾಖೆಯ ಭೂಮಿಯಲ್ಲಿ ನಿಯಮಬಾಹಿರವಾಗಿ ಜೆಸಿಬಿ ಬಳಸಿ ರಸ್ತೆ ನಿರ್ಮಿಸಿದ ಮತ್ತು ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಸಾಗರ ವಲಯ ಅರಣ್ಯಾಧಿಕಾರಿ (RFO) ಅಣ್ಣಪ್ಪ ಬಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಘಟನೆಯ ಹಿನ್ನೆಲೆ: ಅಕ್ರಮದ ಸ್ವರೂಪ
ಸಾಗರ ತಾಲೂಕಿನ ಮಾಲ್ವೆ ಗ್ರಾಮದ ಸರ್ವೆ ನಂ. 43ರಲ್ಲಿರುವ ಅರಣ್ಯ ಇಲಾಖೆಯ ಪರಿಹಾರಾತ್ಮಕ ಅರಣ್ಯ ಪ್ರದೇಶದ ನೆಡುತೋಪು, ಸೋಪ್ಪಿನಬೆಟ್ಟ ಹಾಗೂ ಸೆಕ್ಷನ್ 4 ಅಧಿಸೂಚಿತ ಭೂಮಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆದಿವೆ. ಇಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ನಿಯಮಬಾಹಿರವಾಗಿ ರಸ್ತೆ ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ, ಇಲಾಖೆಯು ಬೆಳೆಸಿದ್ದ ನೂರಾರು ಅಕೇಶಿಯಾ ಮತ್ತು ಇತರ ಕಾಡು ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಲಾಗಿದೆ ಎಂಬ ದೂರು ಕೇಳಿಬಂದಿತ್ತು.
ಎಫ್.ಐ.ಆರ್ ಲೋಪ
ದಿನಾಂಕ 06.05.2026 ರಂದು ಅರಣ್ಯ ಸಚಿವರಿಗೆ ಈ ಬಗ್ಗೆ ಸಚಿತ್ರ ದೂರು ಸಲ್ಲಿಕೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಲಾದ ಎಫ್.ಐ.ಆರ್.ನಲ್ಲಿ ಅಪರಾಧ ನಡೆದ ಸ್ಥಳವು ಅರಣ್ಯದ ಹೊರಗಿದೆ ಎಂದು ತಪ್ಪಾಗಿ ನಮೂದಿಸಲಾಗಿತ್ತು. ಅರಣ್ಯ ಅಪರಾಧದ ಪ್ರಮುಖ ಸೆಕ್ಷನ್ಗಳಾದ 24 ಮತ್ತು 33 ರ ಅಡಿಯಲ್ಲಿ ಪ್ರಕರಣ ದಾಖಲಿಸದೆ, ಅಪರಾಧಿಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸಚಿವರ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.
RFO ಅಮಾನತು
ಅರಣ್ಯ ಸಚಿವರ ಸೂಚನೆ ಮತ್ತು ತನಿಖಾ ವರದಿಗಳ ಆಧಾರದ ಮೇಲೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಪಡೆ ಮುಖ್ಯಸ್ಥರು) ಈ ಅಮಾನತು ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 10(1)(ಡಿ) ಅನ್ವಯ, ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಅಣ್ಣಪ್ಪ ಬಿ. ಅವರನ್ನು ಕೂಡಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಅಮಾನತ್ತಿನ ಅವಧಿಯ ನಿರ್ಬಂಧಗಳು
ಜೀವನಾಧಾರ ಭತ್ಯೆ: ಅಮಾನತ್ತಿನ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಅವರು ಅರ್ಹರಿರುತ್ತಾರೆ.
ಕೇಂದ್ರ ಸ್ಥಾನ ಬಿಡುವಂತಿಲ್ಲ: ಸಕ್ಷಮ ಪ್ರಾಧಿಕಾರಗಳ ಲಿಖಿತ ಪೂರ್ವಾನುಮತಿ ಇಲ್ಲದೆ ತಮ್ಮ ಕೇಂದ್ರ ಸ್ಥಾನವನ್ನು (ಶಿವಮೊಗ್ಗ ವೃತ್ತ) ಬಿಟ್ಟು ಹೋಗುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಪ್ರಕರಣವು ಅರಣ್ಯ ಸಂರಕ್ಷಣೆಯಲ್ಲಿನ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪದ ವಿರುದ್ಧ ಇಲಾಖೆಯು ಕೈಗೊಂಡಿರುವ ಕಠಿಣ ಕ್ರಮವಾಗಿದೆ. ಆ ಮೂಲಕ ಸಾಗರದಲ್ಲಿ ಟಿಂಬರ್ ಲಾಭಿಗೆ ಮಣಿದು ಅಕ್ರಮ ಮರಗಳ ಕಡಿತಲೆಗೆ ಅವಕಾಶ ಮಾಡಿಕೊಡುತ್ತಿರೋ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.





