ಆಗಸ್ಟ್.4ರಿಂದ 8ವರೆಗೆ ಯುಜಿ ನೀಟ್ ಕೋರ್ಸ್ ಗಳ ಆಯ್ಕೆಗೆ ದಾಖಲಾತಿ ಪರಿಶೀಲನೆ- ಕೆಇಎ

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದವರು ಹಾಗೂ ಇದುವರೆಗೂ ದಾಖಲೆ ಪರಿಶೀಲನೆ‌ ಮಾಡಿಕೊಳ್ಳದವರ ದಾಖಲೆ ಪರಿಶೀಲನೆ ಆಗಸ್ಟ್ ‌ 4ರಿಂದ‌ 8ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ.

ಆಗಸ್ಟ್ 2ರಂದು ಬಿಡುಗಡೆ ಮಾಡುವ ಲಿಂಕ್ ಮೂಲಕ ಸ್ಲಾಟ್ ಬುಕ್ ಮಾಡಿಕೊಂಡೇ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಯಾರೆಲ್ಲ ದಾಖಲೆ ಪರಿಶೀಲನೆಗೆ ಬರಬೇಕು?

ಎನ್ ಆರ್ ಐ ವಾರ್ಡ್, ಎನ್ ಆರ್ ಐ ಮತ್ತು ಫಾರೀನ್ ನ್ಯಾಷನಲ್ಸ್ (NRI Ward, NRI, Foreign Nationals)- ಈ ವರ್ಗಗಳನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕು.

ಸಿಇಟಿ-2026ಕ್ಕೆ ನೋಂದಣಿ ಮಾಡಿ ಪರಿಶೀಲನಾ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳದಿರುವ ಅಭ್ಯರ್ಥಿಗಳು (ಕನ್ನಡ, ಗ್ರಾಮೀಣ, ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ಕ್ಲೇಮ್ ಮಾಡಿರುವ) ದಾಖಲೆ ಪರಿಶೀಲನೆಗೆ ಬರಬೇಕು.

ಹೊಸದಾಗಿ ನೋಂದಣಿ ಮಾಡಿ ಕನ್ನಡ, ಗ್ರಾಮೀಣ, ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಕೂಡ ಪರಿಶೀಲನೆಗೆ ಬರಬೇಕು.

ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು (ಕ್ಯಾಟಗರಿ – 2 ರಿಂದ ಕ್ಯಾಟಗರಿ-8ರವರೆಗೆ) ಕ್ಲೇಮ್ ಮಾಡಿರುವ ಎಲ್ಲ ಅಭ್ಯರ್ಥಿಗಳು, ಕೋರಮಂಗಲದ ಅದೇ ಕಾಲೇಜಿನಲ್ಲಿ ಆ.4ರಿಂದ 8ರವರೆಗೆ ನಡೆಯುವ ದಾಖಲೆ ಪರಿಶೀಲನೆಗೆ ಹಾಜರಾಗಬೇಕು. ಕ್ಯಾಟಗರಿ – RC-1 ಮತ್ತು ಕ್ಯಾಟಗರಿ- RC- 9 ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರುವ ಅಗತ್ಯ ಇಲ್ಲ ಎಂದು ಅವರು ವಿವರಿಸಿದ್ದಾರೆ.

ಅಭ್ಯರ್ಥಿಗಳು ತಮ್ಮ ಕ್ಲೇಮ್ ಪ್ರಕಾರ ಮೂಲ ದಾಖಲೆಗಳ ಸಮೇತ ಪರಿಶೀಲನೆಗೆ ಹಾಜರಾಗಬೇಕು. ವಿವರಗಳಿಗೆ ಕೆಇಎ ವೆಬ್ ಸೈಟ್ ನೋಡಬೇಕು ಎಂದು ಅವರು ವಿವರಿಸಿದ್ದಾರೆ.