100% ಪರಿಶುದ್ಧತೆ ಸುಳ್ಳು: ಡಾಬರ್ ಉತ್ಪನ್ನಗಳ ಮಾರಾಟ ಸ್ಥಗಿತಕ್ಕೆ FSSAI ಆದೇಶ!

ನವದೆಹಲಿ: ತನ್ನ ಉತ್ಪನ್ನಗಳು ‘100 ಪ್ರತಿಶತ ಪರಿಶುದ್ಧ’ ಹಾಗೂ ‘ಸಂಪೂರ್ಣ ನ್ಯಾಚುರಲ್’ ಎಂದು ಜಾಹೀರಾತು ನೀಡಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿದ್ದ ಪ್ರಮುಖ ಎಫ್‌ಎಂಸಿಜಿ ಸಂಸ್ಥೆ ‘ಡಾಬರ್ ಇಂಡಿಯಾ’ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ನಿಯಮಬಾಹಿರವಾಗಿ ಇಂತಹ ಲೇಬಲ್‌ಗಳನ್ನು ಬಳಸಿ ಮಾರಾಟ ಮಾಡುವುದನ್ನು ತಕ್ಷಣದಿಂದಲೇ ತಡೆಹಿಡಿಯುವಂತೆ ಆದೇಶಿಸಿದೆ.

ಯಾವೆಲ್ಲಾ ಉತ್ಪನ್ನಗಳ ಮೇಲೆ ಕ್ರಮ?

ಡಾಬರ್ ಸಂಸ್ಥೆಯು ತನ್ನ ಜೇನುತುಪ್ಪ, ಹಸುವಿನ ತುಪ್ಪ, ತೆಂಗಿನ ಎಣ್ಣೆ, ಎಳ್ಳೆಣ್ಣೆ, ಆಪಲ್ ಸೈಡರ್ ವಿನೆಗರ್, ಎಳನೀರು ಹಾಗೂ ತೆಂಗಿನ ಹಾಲು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ‘100% ಪ್ಯೂರ್’, ‘100% ಆರ್ಗ್ಯಾನಿಕ್’, ‘100% ಪ್ಯೂರಿಟಿ ಗ್ಯಾರಂಟೀಡ್’ ಮತ್ತು ‘100% ಟೆಂಡರ್ ಕೋಕೊನಟ್ ವಾಟರ್’ ಎಂಬ ದಾರಿ ತಪ್ಪಿಸುವ ಪದಗಳನ್ನು ಬಳಸಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

FSSAI ನೀಡಿದ ಕಾರಣವೇನು?

ಉತ್ಪನ್ನಗಳ ಮೇಲೆ ‘100%’ ಎಂದು ಕ್ಲೇಮ್ ಮಾಡುವುದು 2018ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ ಎಂದು FSSAI ಸ್ಪಷ್ಟಪಡಿಸಿದೆ. ಯಾವುದೇ ಆಹಾರ ಉತ್ಪನ್ನವು ನೂರಕ್ಕೆ ನೂರರಷ್ಟು ಶುದ್ಧ ಎಂದು ವೈಜ್ಞಾನಿಕವಾಗಿ ಅಥವಾ ಪ್ರಯೋಗಾಲಯದಲ್ಲಿ ಸಾಬೀತುಪಡಿಸಲು ಸಾಧ್ಯವಿಲ್ಲ. ಇಂತಹ ಜಾಹೀರಾತುಗಳು ಗ್ರಾಹಕರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತವೆ.

ಇದರ ಜೊತೆಗೆ, ಸೂಕ್ತ ಸಾವಯವ ಅನುಮೋದನೆ ಪಡೆಯದೆಯೇ ಡಾಬರ್ ಸಂಸ್ಥೆಯು ತನ್ನ ‘ಆರ್ಗ್ಯಾನಿಕ್ ಜೇನುತುಪ್ಪ’ ಹಾಗೂ ‘ಹಿಮಾಲಯನ್ ಆರ್ಗ್ಯಾನಿಕ್ ಆಪಲ್ ಸೈಡರ್ ವಿನೆಗರ್’ ಪ್ಯಾಕೆಟ್‌ಗಳ ಮೇಲೆ ‘ಜೈವಿಕ್ ಭಾರತ್’ ಲೋಗೋ ಮುದ್ರಿಸಿರುವುದು 2017ರ ಎಫ್‌ಎಸ್‌ಎಸ್ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

15 ದಿನಗಳ ಗಡುವು ನೀಡಿದ ಪ್ರಾಧಿಕಾರ

ಡಾಬರ್ ಸಂಸ್ಥೆಯ ‘ಹೋಮ್‌ಮೇಡ್ ಕೋಕೊನಟ್ ಮಿಲ್ಕ್’ ಉತ್ಪನ್ನಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೋಟಿಸ್ ಜಾರಿ ಮಾಡಿದ್ದರೂ ಕಂಪನಿಯು ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿರುವ FSSAI, ಇಂತಹ ಮಾನದಂಡ ರಹಿತ ಉತ್ಪನ್ನಗಳ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಿ, ಮುಂದಿನ 15 ದಿನಗಳ ಒಳಗಾಗಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಕಂಪನಿಗೆ ಸೂಚಿಸಿದೆ.

ಡಾಬರ್ ಸಂಸ್ಥೆಯ ಸ್ಪಷ್ಟನೆ

FSSAI ಹೊರಡಿಸಿರುವ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಡಾಬರ್ ಇಂಡಿಯಾ ಸಂಸ್ಥೆಯು, “ಪ್ರಾಧಿಕಾರ ನೀಡಿರುವ ನೋಟಿಸ್ ನಮಗೆ ತಲುಪಿದೆ. ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಪ್ರತಿಯೊಂದು ಅಂಶಗಳನ್ನು ಹಾಗೂ ನಮ್ಮ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ತಿಳಿಸಿದೆ.