ನೀಟ್ ಬೆನ್ನಲ್ಲೇ ಜಾರ್ಖಂಡ್ ನೇಮಕಾತಿ ಅಕ್ರಮ ಆರೋಪ: ಪ್ರತಿಭಟನೆ ವೇಳೆ ಘರ್ಷಣೆ; ಬಂದ್‌ಗೆ ಕರೆ

ರಾಂಚಿ: ಜಾರ್ಖಂಡ್‌ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಧಾನಸಭೆ ಬಳಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಬಿಜೆಪಿ ಆಗಸ್ಟ್‌ 11ರಂದು ಜಾರ್ಖಂಡ್ ಬಂದ್‌ಗೆ ಕರೆ ನೀಡಿದೆ.

ನೇಮಕಾತಿ ಅಕ್ರಮದ ವಿರುದ್ಧ ಕಳೆದ ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜೆಎಲ್‌ಕೆಎಂ ನಾಯಕ ದೇವೇಂದ್ರ ನಾಥ್ ಮಹ್ತೊ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ತೀವ್ರವಾಗಿ ಕುಸಿದಿದ್ದು, ಸದ್ಯ ರಾಂಚಿ ಸದರ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಅಧಿಕಾರಿ ನ್ಯಾನ್ಸಿ ಪ್ರಿಯಾ ತಿಳಿಸಿದ್ದಾರೆ.

 

ಇದೇ ವೇಳೆ ವಿಧಾನಸಭೆ ಬಳಿ ನಡೆದ ಪೊಲೀಸ್ ಲಾಠಿಚಾರ್ಜ್‌ನಲ್ಲಿ ಮಹ್ತೊ ಅವರ ಸಹಾಯಕ ಪಂಕಜ್ ಕುಮಾರ್ ಗಾಯಗೊಂಡಿದ್ದು, ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಸುಧಾರಣಾ ವೇದಿಕೆ ವಿಧಾನಸಭೆಗೆ ಮುತ್ತಿಗೆ ಹಾಕಲು ಮುಂದಾಗಿತ್ತು. ಆರಂಭದಲ್ಲಿ ಪ್ರತಿಭಟನೆ ಶಾಂತಿಯುತವಾಗಿರಲಿದೆ ಎಂದು ಸಂಘಟಕರು ಭರವಸೆ ನೀಡಿದ್ದರು. ಆದರೆ ಕೆಲ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ರಾಂಚಿ ನಗರ ಎಸ್‌ಪಿ ಪರಾಸ್ ರಾಣಾ ತಿಳಿಸಿದ್ದಾರೆ.

ಕಲ್ಲು ತೂರಾಟದಲ್ಲಿ ಮೂವರುರಿಂದ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಬ್ಬರು ಸಿಬ್ಬಂದಿಯ ತಲೆಗೆ ಹೊಲಿಗೆ ಹಾಕುವಷ್ಟು ಗಾಯಗಳಾಗಿವೆ. ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗುವ ವೇಳೆ ಇತರ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಗಿ ಭದ್ರತೆಯ ನಡುವೆಯೂ ಪ್ರತಿಭಟನಾಕಾರರು ವಿಧಾನಸಭೆಯ ಗಡಿ ಪ್ರದೇಶ ತಲುಪುವಲ್ಲಿ ಯಶಸ್ವಿಯಾಗಿದ್ದರು. ಘಟನೆ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.