ಮಾಸಿಕ ₹70 ಸಾವಿರ ವೇತನದ ಅಧಿಕಾರಿಗೆ ತಿಂಗಳಿಗೆ ₹6 ಲಕ್ಷ ಜಮೆ: ಖಜಾನೆ ಕಚೇರಿ ಮೇಲಿನ ಲೋಕಾಯುಕ್ತ ದಾಳಿ ವೇಳೆ ಪತ್ತೆ

ಬೆಂಗಳೂರು: ಸರ್ಕಾರಿ ಕೆಲಸಗಳ ಬಿಲ್ ಮಂಜೂರಾತಿ ಮಾಡಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಹಾಗೂ ಕಮಿಷನ್ ನೀಡದೆ ಕಡತಗಳನ್ನು ವಿಲೇವಾರಿ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನ ವಿವಿಧ ಖಜಾನೆ (ಟ್ರೆಜರಿ) ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಶಾಕ್ ನೀಡಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಹಾಗೂ ಎಡಿಜಿಪಿ ಮನೀಶ್ ಖರ್ಭೀಕರ್ ಅವರ ನಾಯಕತ್ವದಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆದಿದೆ. ಒಟ್ಟು 11 ನ್ಯಾಯಾಂಗ ಅಧಿಕಾರಿಗಳು ಹಾಗೂ 39 ಪೊಲೀಸ್ ಸಿಬ್ಬಂದಿಯನ್ನೊಳಗೊಂಡ 13 ಪ್ರತ್ಯೇಕ ತಂಡಗಳು ಬೆಂಗಳೂರು ನಗರ ವ್ಯಾಪ್ತಿಯ 7, ಗ್ರಾಮಾಂತರದ 5 ಖಜಾನೆಗಳು ಹಾಗೂ ಕೆಜಿಐಡಿ ಖಜಾನೆ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದವು.

ಬಿಲ್ ಬಾಕಿ ಇಟ್ಟುಕೊಳ್ಳುವ ಕರಾಮತ್ತು; ಸಿಬ್ಬಂದಿಯಿಂದ ನಿಯಮ ಉಲ್ಲಂಘನೆ

ಖಜಾನೆಗೆ ಸಲ್ಲಿಕೆಯಾಗುವ ಕಡತಗಳನ್ನು ಸಿಬ್ಬಂದಿಗೆ ಸಮಾನವಾಗಿ ವಿಂಗಡಿಸಿ ವಿಲೇವಾರಿ ಮಾಡಲು ‘ರೌಂಡ್ ರಾಬಿನ್’ ಪದ್ಧತಿಯನ್ನು ಅನುಸರಿಸಬೇಕೆಂಬ ಕಡ್ಡಾಯ ನಿಯಮವಿದೆ. ಆದರೆ, ಖಜಾನೆಯ ಅಧಿಕಾರಿಗಳು ಈ ಪದ್ಧತಿಯನ್ನು ಗಾಳಿಗೆ ತೂರಿ, ನಿಯಮಬಾಹಿರವಾಗಿ ತಮಗೆ ಬೇಕಾದ ರೀತಿಯಲ್ಲಿ ಬಿಲ್‌ಗಳನ್ನು ಹಂಚಿಕೆ ಮಾಡಿಕೊಳ್ಳುತ್ತಿದ್ದರು. ತಮಗೆ ಬರಬೇಕಾದ ಲಾಭ ಅಥವಾ ಕಮಿಷನ್ ಪಡೆಯುವ ದುರುದ್ದೇಶದಿಂದಲೇ ಪರಿಶೀಲನೆಯ ನೆಪದಲ್ಲಿ ಬಿಲ್‌ಗಳನ್ನು ದಿನಗಟ್ಟಲೆ ಕಚೇರಿಯಲ್ಲೇ ಬಾಕಿ ಇರಿಸಿಕೊಳ್ಳಲಾಗುತ್ತಿತ್ತು ಎಂಬುದು ಪರಿಶೀಲನೆ ವೇಳೆ ದೃಢಪಟ್ಟಿದೆ.

ಇದಲ್ಲದೆ, ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಗುರುತಿನ ಚೀಟಿ ಧರಿಸದೇ ಇರುವುದು, ನಿಯಮಿತ ಸಮವಸ್ತ್ರವಿಲ್ಲದೆ ಸಾರ್ವಜನಿಕರೊಂದಿಗೆ ವ್ಯವಹರಿಸುವುದು ಹಾಗೂ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಪ್ರಮುಖ ಲೆಕ್ಕಪತ್ರಗಳ ಪುಸ್ತಕಗಳನ್ನು ಸರಿಯಾಗಿ ನಿರ್ವಹಿಸದಿರುವುದು ಸೇರಿದಂತೆ ಹಲವು ಗಂಭೀರ ಲೋಪಗಳು ತಪಾಸಣೆ ವೇಳೆ ಬೆಳಕಿಗೆ ಬಂದಿವೆ.

ಮಾಸಿಕ ₹70 ಸಾವಿರ ವೇತನದ ಅಧಿಕಾರಿಗೆ ತಿಂಗಳಿಗೆ ₹6 ಲಕ್ಷ ಜಮೆ!

ಮಲ್ಲೇಶ್ವರದಲ್ಲಿರುವ ಉತ್ತರ ವಿಭಾಗದ ಖಜಾನೆ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ ಅಧಿಕಾರಿಯೊಬ್ಬರ ಆಸ್ತಿ ಹಾಗೂ ವಹಿವಾಟಿನ ಕುರಿತು ಸ್ಫೋಟಕ ಮಾಹಿತಿ ಲಭಿಸಿದೆ. ಪ್ರತಿ ತಿಂಗಳು ₹70,000 ಅಧಿಕೃತ ವೇತನ ಪಡೆಯುವ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಗೆ ಕಳೆದ 8 ತಿಂಗಳಲ್ಲಿ ಬರೋಬ್ಬರಿ ₹23 ಲಕ್ಷ ಜಮೆಯಾಗಿರುವುದು ಪತ್ತೆಯಾಗಿದೆ. ಅಂದರೆ, ಪ್ರತಿ ತಿಂಗಳು ಸರಾಸರಿ ₹5 ರಿಂದ ₹6 ಲಕ್ಷದಷ್ಟು ಅನುಮಾನಾಸ್ಪದ ಹಣ ಅವರ ಖಾತೆಗೆ ಹರಿದುಬಂದಿದೆ.

ಈ ಭಾರಿ ಮೊತ್ತದ ಮೂಲದ ಕುರಿತು ಉಪಲೋಕಾಯುಕ್ತರು ಪ್ರಶ್ನಿಸಿದಾಗ, ಸಂಬಂಧಪಟ್ಟ ಅಧಿಕಾರಿಯು ಯಾವುದೇ ಸೂಕ್ತ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅಕ್ರಮ ಆಸ್ತಿ ಸಂಪಾದನೆ ಕುರಿತು ಆಳವಾದ ತನಿಖೆ ನಡೆಸುವಂತೆ ಬಿ. ವೀರಪ್ಪ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಖಜಾನೆ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಪೂರ್ಣ ತಡೆ ಹಾಕಲು ಮುಂದೆಯೂ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಲೋಕಾಯುಕ್ತ ತಿಳಿಸಿದೆ.